ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಭಾರತ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಯಾತ್ರೆಯ ಲೋಗೊ ಬಿಡುಗಡೆ ಮಾಡಿದರು.
ಇಂದು, ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ, ಸಲೀಂ ಅಹಮ್ಮದ್, ರಾಮಲಿಂಗಾ ರೆಡ್ಡಿ ಮೊದಲಾದವರ ಉಪಸ್ಥಿತಿಯಲ್ಲಿ ಭಾರತ ಜೋಡೋ ಯಾತ್ರೆಯ ಲೋಗೋ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಭಾರತ ಜೋಡೋ ಯಾತ್ರೆ ಕರ್ನಾಟಕದಲ್ಲಿ ಗುಂಡ್ಲುಪೇಟೆಯಿಂದ ಪ್ರಾರಂಭ ಆಗಲಿದೆ. ಕರ್ನಾಟಕದಲ್ಲಿ 21 ದಿನ ಮಾರ್ಗವನ್ನು ನಿಗದಿ ಮಾಡಿದ್ದೇವೆ. ಪ್ರತಿದಿನ 25 ಕಿಮೀಗಳಂತೆ ಪಾದಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದು ಕೇವಲ ಪಕ್ಷದ ಕಾರ್ಯಕ್ರಮವಲ್ಲ, ಭಾರತವನ್ನು ಓಗ್ಗೂಡಿಸುವ ಕಾರ್ಯಕ್ರಮವಾಗಿದ್ದು, ದೇಶವನ್ನು ಒಗ್ಗೂಡಿಸುವ ಕಾರ್ಯದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
ಕೈನ 5 ಬೆರಳುಗಳು ಇರುವ ರೀತಿ ಪಂಚಸೂತ್ರದ ಮೂಲಕ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಬೇಕಿದೆ. ಭಾರತ ಜೋಡೋ ಯಾತ್ರೆ ಹೊಸ ವಾತಾವರಣ ಉಂಟು ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಪಾದಯಾತ್ರೆ ನಡೆಯಲಿದ್ದು, ಸೆಪ್ಟೆಂಬರ್ 7ರಿಂದ 19 ದಿನ ಕೇರಳ, 4 ದಿನ ತಮಿಳುನಾಡಿನಲ್ಲಿ ಸಾಗಲಿದೆ. ರಾಹುಲ್ ಗಾಂಧಿ ಜೊತೆಗೆ 125 ಜನರು ಪಾಲ್ಗೊಳ್ಳಲಿದ್ದಾರೆ. 12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿರುವ ಈ ಯಾತ್ರೆಯಲ್ಲಿ ಕರ್ನಾಟಕದಲ್ಲಿ 21 ದಿನಗಳ ಕಾಲ 511 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ