ಬ್ಲ್ಯಾಕ್ ಫಂಗಸ್ಸಿಗೆ ಎಲ್ಲ ಆಸ್ಪತ್ರೆಗಳಿಗೆ ಸರ್ಕಾರದಿಂದಲೇ ಉಚಿತ ಇಂಜೆಕ್ಷನ್, ಔಷಧ ಪೂರೈಕೆಗೆ ಹೊರಟ್ಟಿ ಒತ್ತಾಯ

ಹುಬ್ಬಳ್ಳಿ: ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ರೋಗದಿಂದ ಬಳಲುತ್ತಿರುವಂತಹ ರೋಗಿಗಳಿಗೆ ಈ ಇಂಜೆಕ್ಷನ್ ಹಾಗೂ ಪೂರಕ ಔಷಧೋಪಚಾರವನ್ನು ಸರ್ಕಾರಿ ಹಾಗೂ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಉಚಿತವಾಗಿ ಪೂರೈಸುವ ವ್ಯವಸ್ಥೆ ಮಾಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಊ ಕುರಿತು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರಿಗೆ ಪತ್ರ ಬರೆದಿರುವ ಅವರು, ಕೂಡಲೇ ಸರ್ಕಾರ ಈ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.
ಕೋವಿಡ್ ಮಹಾಮಾರಿಯ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಆರೋಗ್ಯ ಇಲಾಖೆ ಶ್ರಮಿಸುತ್ತಿರುವ ಬೆನ್ನ ಹಿಂದೆಯೇ ಕೊರೊನಾ ಮಹಾಮಾರಿ ರೋಗದಿಂದ ಪೀಡಿತರಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಜನರಲ್ಲಿ ಈಗ ಮತ್ತೊಂದು ಬ್ಲ್ಯಾಕ್ ಫಂಗಸ್ ಎಂಬ ಭಯಾನಕ ರೋಗ ಅಟ್ಟಹಾಸ ಮೆರೆಯುತ್ತಿದ್ದು ಜನರಲ್ಲಿ ಮತ್ತುಷ್ಟು ಭೀತಿ ಮೂಡಿಸಿದೆ.
ನಿನ್ನೆ ವಿಜಯಪುರ ಜಿಲ್ಲೆಯಲ್ಲಿ ೨೬ ಜನರಿಗೆ, ದಾವಣಗೆರೆ ಜಿಲ್ಲೆಯಲ್ಲಿ ೦೬ ಜನರಿಗೆ, ಧಾರವಾಡ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್ ಫಂಗಸ್ ದೃಢಪಟ್ಟಿರುವ ಬಗ್ಗೆ ನಾನು ಮಾಹಿತಿ ಸಂಗ್ರಹಿಸಿದ್ದು, ಈ ರೋಗಕ್ಕೆ ನೀಡಬೇಕಾದ ನಿಗದಿತ ಚಿಕಿತ್ಸೆ ಬಗ್ಗೆ ಸರ್ಕಾರದಿಂದ ಖಚಿತವಾದ ಮಾರ್ಗಸೂಚಿ ಇಲ್ಲ. ನಿನ್ನೆಯ ದಿನ ನೀವು ರಾಜ್ಯದಲ್ಲಿ ಒಟ್ಟು ೯೭ ಜನರಿಗೆ ಬ್ಲ್ಯಾಕ್ ಫಂಗಸ್ ದೃಢಪಟ್ಟಿರುವುದಾಗಿ ಹೇಳಿಕೆ ನೀಡಿರುತ್ತೀರಿ. ಅದರಂತೆ ಈ ರೋಗದ ನಿಯಂತ್ರಣಕ್ಕೆ ಚಿಕಿತ್ಸೆಗೆ ಬೇಕಾಗುವಂತಹ ಔಷಧ, ಇಂಜೆಕ್ಷನ್ ಹಾಗೂ ಪೂರಕ ಔಷಧಗಳು ಕಳೆದ ಒಂದು ವಾರದಿಂದ ರಾಜ್ಯದ ಯಾವುದೇ ಭಾಗದಲ್ಲಿಯೂ ದೊರೆಯುತ್ತಿಲ್ಲ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಲಭ್ಯವಿಲ್ಲ. ಇದರಿಂದ ಈ ರೋಗದಿಂದ ಬಳಲುತ್ತಿರುವ ಜನರು ಸೂಕ್ತ ಉಪಚಾರವಿಲ್ಲದೇ ಜೀವ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ನನಗೆ ಲಭ್ಯವಾದ ಮಾಹಿತಿ ಪ್ರಕಾರ ಈ ರೋಗ ನಿಯಂತ್ರಣಕ್ಕೆ ಒಂದು ದಿನಕ್ಕೆ ಒಬ್ಬ ರೋಗಿಗೆ ೦೬ ಇಂಜೆಕ್ಷನ್ ಅವಶ್ಯಕತೆ ಇದ್ದು ಒಂದು ಇಂಜೆಕ್ಷನ್ ಬೆಲೆ ೮೦೦೦ ರೂ.ಗಳಾಗುತ್ತದೆ ಎಂದು ತಿಳಿದು ಬಂದಿದೆ. ಇದರಿಂದ ರೋಗಿಗಳಿಗೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮಗೆ ಆಗ್ರಹಪೂರ್ವಕವಾಗಿ ಸಲಹೆ ನೀಡುತ್ತಿದ್ದು, ಬ್ಲ್ಯಾಕ್ ಫಂಗಸ್ ರೋಗದಿಂದ ಬಳಲುತ್ತಿರುವಂತಹ ರೋಗಿಗಳಿಗೆ ಈ ಇಂಜೆಕ್ಷನ್ ಹಾಗೂ ಪೂರಕ ಔಷಧೋಪಚಾರವನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪೂರೈಸುವ ವ್ಯವಸ್ಥೆಯನ್ನು ಕೂಡಲೇ ಸರ್ಕಾರದಿಂದ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಡುತ್ತಿರುವದು ನನ್ನ ಗಮನಕ್ಕೆ ಬಂದಿದೆ. ಕಾರಣ ಈಗಾಗಲೇ ಬೆಂಗಳೂರಿನ ಬಿಬಿಎಂಪಿ. ವ್ಯಾಪ್ತಿಯಲ್ಲಿ ಆರಂಭಿಸಿರುವ ತಂತ್ರಜ್ಞಾನ ಆಧಾರಿತ ಬೆಡ್ ಹಂಚಿಕೆ ವ್ಯವಸ್ಥೆಯನ್ನು ರಾಜ್ಯದ ಪ್ರತಿ ಜಿಲ್ಲಾ ಹಂತದಲ್ಲಿ ಜಾರಿಗೊಳಿಸಿ ಕೋವಿಡ್ ಚಿಕಿತ್ಸೆ ನೀಡುತ್ತಿರುವಂತಹ ಎಲ್ಲ ಆಸ್ಪತ್ರೆಗಳಲ್ಲಿ ಅಂದರೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐ.ಸಿ.ಯು., ವೆಂಟಿಲೇಟರ್, ಆಕ್ಸಿಜನ್ ಮತ್ತು ಸಾಮಾನ್ಯ ದರ್ಜೆಯ ಎಷ್ಟು ಹಾಸಿಗೆಗಳು ಲಭ್ಯವಿರುತ್ತವೆ ಎಂಬ ಪಾರದರ್ಶಕವಾದ ಮಾಹಿತಿಯನ್ನು ಪ್ರತಿನಿತ್ಯ ಮಾಧ್ಯಮಗಳ ಮೂಲಕ ಘೋಷಣೆ ಮಾಡಬೇಕು. ಅದಕ್ಕೆ ಬೇಕಾದಂತಹ ಸೂಕ್ತ ತಂತ್ರಜ್ಞಾನವನ್ನು ಬಳಸಿಕೊಂಡು ಪಾರದರ್ಶಕವಾದ ಮಾಹಿತಿ ಕೂಡಲೇ ಅಗತ್ಯವಿರುವ ಸೋಂಕಿತರಿಗೆ ದೊರೆಯುವಂತೆ ಜನಸ್ನೇಹಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ತೀವ್ರ ಸಂಕಷ್ಟದಲ್ಲಿರುವ ನಾಡಿನ ಜನತೆಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಡಾ.ಸುಧಾಕರ ಅವರನ್ನು ಆಗ್ರಹಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement