ನವದೆಹಲಿ: ಚುನಾವಣಾ ಆಯೋಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಸುತ್ತುವರಿದಿರುವ ತೀವ್ರ ವಿವಾದದ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.
ಚುನಾವಣಾ ಆಯೋಗದ ಕೆಲವು ಮಹತ್ವದ ನಿರ್ಧಾರಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಆಧಾರವಾಗಿಟ್ಟುಕೊಂಡು ಈ ಅರ್ಜಿಯನ್ನು ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಇತರ ಇಬ್ಬರು ಚುನಾವಣಾ ಆಯುಕ್ತರ ಸಮ್ಮತಿಯಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ, ಜ್ಞಾನೇಶಕುಮಾರ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆ ಪಡೆಯದೆ ಕೈಗೊಂಡಿದ್ದಾರೆ ಎನ್ನಲಾದ ನಿರ್ಧಾರಗಳು, ಮಾರ್ಗಸೂಚಿಗಳು ಹಾಗೂ ಸಾಫ್ಟ್ವೇರ್ ಬದಲಾವಣೆಗಳನ್ನು ಅಸಂವಿಧಾನಿಕ ಮತ್ತು ಅಮಾನ್ಯ ಎಂದು ಘೋಷಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಇದರ ಜೊತೆಗೆ, ಅಂತಹ ಎಲ್ಲಾ ನಿರ್ಧಾರಗಳನ್ನು ಕಾನೂನುಬಾಹಿರ ಎಂದು ಘೋಷಿಸಿ, ಮೂಲ ‘ಫಾರ್ಮ್-6’ ಅನ್ನು ಮರುಸ್ಥಾಪಿಸಬೇಕೆಂಬ ಬೇಡಿಕೆಯನ್ನೂ ಅರ್ಜಿ ಒಳಗೊಂಡಿದೆ. ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ 13 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೇಗೆ ತೆಗೆದುಹಾಕಲಾಯಿತು ಎಂಬುದರ ಕುರಿತು ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ನಡೆಸುವಂತೆ ಕೂಡ ಮನವಿ ಮಾಡಲಾಗಿದೆ.
ಅದೇ ವೇಳೆ, ಜನಪ್ರತಿನಿಧಿತ್ವ ಕಾಯ್ದೆ (Representation of the People Act) ಅಡಿಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಜ್ಞಾನೇಶಕುಮಾರ, ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ ಗರ್ಗ್ ಹಾಗೂ ಚುನಾವಣಾ ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಇತ್ತೀಚೆಗೆ ಪ್ರಕಟವಾದ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ನಂತರ ಜ್ಞಾನೇಶಕುಮಾರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಸೇರಿದಂತೆ ಹಲವು ವಿಷಯಗಳಲ್ಲಿ ಚುನಾವಣಾ ಆಯುಕ್ತರು ವ್ಯಕ್ತಪಡಿಸಿದ್ದ ಆಕ್ಷೇಪಣೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಆ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಅವರು ಎಸ್ಐಆರ್ಗೆ ಸಂಬಂಧಿಸಿದ ನಿರ್ಧಾರಗಳು, ಫಾರ್ಮ್-6ರಲ್ಲಿ ಮಾಡಲಾದ ಬದಲಾವಣೆಗಳು ಹಾಗೂ ಮತದಾರರ ಪಟ್ಟಿಯ ದತ್ತಾಂಶ ನಿರ್ವಹಣೆ ಕುರಿತ ಆದೇಶಗಳ ಬಗ್ಗೆ ಕನಿಷ್ಠ 14 ಸಂದರ್ಭಗಳಲ್ಲಿ ಆಕ್ಷೇಪಣೆ ದಾಖಲಿಸಿದ್ದರು.
ತಮ್ಮ ಅರಿವಿಲ್ಲದೆ ಅಥವಾ ತಮ್ಮ ಶಿಫಾರಸುಗಳಿಗೆ ವಿರುದ್ಧವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದೇ ಅವರ ಪ್ರಮುಖ ಆಕ್ಷೇಪಣೆಯಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಇಂಡಿಯನ್ ಎಕ್ಸ್ಪ್ರೆಸ್ ವರದಿಗೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಕಳೆದ ಒಂದು ವರ್ಷದ ಅವಧಿಯಲ್ಲಿ ತೆಗೆದುಕೊಳ್ಳಲಾದ ಎಲ್ಲಾ ನಿರ್ಧಾರಗಳನ್ನೂ ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿತ್ತು. ಯಾವುದೇ ಸಂಸ್ಥೆಯಲ್ಲಿ ಚರ್ಚೆ-ವಿಮರ್ಶೆಗಳ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಹಾಗೂ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ ಪ್ರಕ್ರಿಯೆಯ ಭಾಗ ಎಂದು ಆಯೋಗ ಹೇಳಿತ್ತು.
ಇದೀಗ ಈ ವಿವಾದ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದ್ದು, ವರದಿ ಪ್ರಕಟವಾದ ಬಳಿಕ ಪ್ರತಿಪಕ್ಷಗಳು ಕೂಡ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ. ಗುರುವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಜ್ಞಾನೇಶಕುಮಾರ ಅವರನ್ನು “ದೇಶದ್ರೋಹಿ” ಎಂದು ಕರೆದಿದ್ದು, ಅವರ ರಾಜೀನಾಮೆಗೆ ಆಗ್ರಹಿಸಿದ್ದಾರ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಮೌನವಾಗಿ ನೋಡುತ್ತ ಕುಳಿತುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ