ಮಂಗಳೂರು: ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಗೇರುಕಟ್ಟೆಯಿಂದ ಬೆಳ್ತಂಗಡಿ ಕಡೆ ಸರ್ಕಾರಿ ಬಸ್ ಸಂಚರಿಸುತ್ತಿತ್ತು. ಗೇರುಕಟ್ಟೆ ಪ್ರದೇಶದಲ್ಲಿ ಅಕ್ಕ-ತಂಗಿಯರಾದ ಇಬ್ಬರು ವಿದ್ಯಾರ್ಥಿನಿಯರು ಬಸ್ ಹತ್ತಿದ್ದರು. ಅವರು ಬಾಗಿಲು ಬಳಿ ನಿಂತಿದ್ದರು.
ಬಸ್ ಕಳಿಯ ಗ್ರಾಮದ ರೇಷ್ಮೆ ರೋಡ್ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಬಾಗಿಲು ಏಕಾಏಕಿ ತೆರೆದಿದೆ. ಈ ವೇಳೆ ಬಾಗಿಲ ಬಳಿ ನಿಂತಿದ್ದ ವಿದ್ಯಾರ್ಥಿನಿಯರು ನಿಯಂತ್ರಣ ತಪ್ಪಿ ಹೊರಗೆ ಎಸೆಯಲ್ಪಟ್ಟಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಇಬ್ಬರು ವಿದ್ಯಾರ್ಥಿನಿಯರನ್ನುಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಸಂಪೂರ್ಣ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈದ್ಯರ ಪ್ರಕಾರ, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರೂ ವಿದ್ಯಾರ್ಥಿನಿಯರು ಗೇರುಕಟ್ಟೆಯಿಂದ ಬೆಳ್ತಂಗಡಿಯಲ್ಲಿರುವ ತಮ್ಮ ಶಾಲೆಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೆಳ್ತಂಗಡಿ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ