ಅಂಕೋಲಾ | ಶಿರೂರು ಗುಡ್ಡ ಕುಸಿತ; ನದಿ ನೀರು ಉಕ್ಕಿ ಉಳುವರೆಯಲ್ಲಿ 3 ಮನೆಗಳಿಗೆ ತೀವ್ರ ಹಾನಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಬಿದ್ದ ಮಣ್ಣು ರಾಷ್ಟ್ರೀಯ ಹೆದ್ದಾರಿ ದಾಟಿ ಪಕ್ಕದ ಗಂಗಾವಳಿ ನದಿಗೆ ಹೋಗಿ ಬಿದ್ದ ರಭಸಕ್ಕೆ ನದಿ ನೀರು ಉಕ್ಕಿ ಮತ್ತೊಂದು ದಡಕ್ಕೆ ಅಪ್ಪಳಿಸಿದೆ. ಎತ್ತರದ ಅಲೆಗಳೊಂದಿಗೆ ಅಪ್ಪಳಿಸಿದ ಪರಿಣಾಮವಾಗಿ ನದಿಯ ಆಚೆಗೆ ಇದ್ದ ಉಳವರೆ ಗ್ರಾಮದ ನದಿ ದಂಡೆಯಲ್ಲಿರುವ 3 ಮನೆಗಳಿಗೆ ಹಾನಿಯಾಗಿದೆ ಅಥವಾ ಕೊಚ್ಚಿಹೋಗಿದೆ. ಅಲ್ಲದೆ, ಆ ಮನೆಯಲ್ಲಿರುವ ಕೆಲವರಿಗೆ  ಮನೆಯ ಗೋಡೆಗಳು ಬಡಿದು ಗಾಯಗಳಾಗಿವೆ ಎಂದು ವರದಿಯಾಗಿದೆ.

ಗುಡ್ಡ ಕುಸಿದ ಪರಿಣಾಮ ಗಂಗಾವಳಿ ನದಿಯ ಮತ್ತೊಂದು ದಡದಲ್ಲಿರುವ ಮೂರು ಮನೆಗಳು ಹಾನಿಗೊಳಗಾಗಿವೆ. ಗುಡ್ಡ ಕುಸಿದು ಭಾರೀ ಗಾತ್ರದ ಕಲ್ಲುಬಂಡೆಯೊಂದು ಉರುಳಿ ಮಣ್ಣು ಸಮೇತ ನದಿಗೆ ಹೋಗಿ ಬಿದ್ದ ಪರಿಣಾಮ ಭಾರೀ ಎತ್ತರದ ಅಲೆ ಎದ್ದು ನದಿ ಮತ್ತೊಂದು ಭಾಗದಲ್ಲಿದ್ದ ಮನೆಗಳಿಗೆ ಅಪ್ಪಳಿಸಿದೆ. ಆಳದ ನದಿ ಮಧ್ಯೆ ಬಂಡೆ ಬಿದ್ದಿದ್ದು, ಬಂಡೆಯ ಮೇಲ್ಭಾಗ ನೀರಿನ ಹೊರಗೆ ಕಾಣುತ್ತಿದೆ. ನದಿಗೆ ಬಂಡೆ ಬಿದ್ದು ಅಲೆ ಎದ್ದು ನೀರು ಅಪ್ಪಳಿಸಿದ ರಭಸಕ್ಕೆ ಮೂರು ಮನೆಗಳಿಗೆ ತೀವ್ರ ಹಾನಿಯಾಗಿದೆ ಅಥವಾ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಹೇಳಲಾಗಿದೆ. ಇದರಿಂದ ಸುಮಾರಿ ಹತ್ತು ಜನರಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ.

ಶಿರೂರು ಬಳಿ ಅಂಕೋಲಾ-ಕುಮಟಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಗುಡ್ಡ ಕುಸಿತದ ದುರ್ಘಟನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಮೃತ ದೇಹಗಳು ಪತ್ತೆಯಾಗಿವೆ. ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಶಂಕೆಯಿದೆ. ಮಂಗಳವಾರ ಬೆಳಿಗ್ಗೆ ಸಂಭವಿಸಿದ ಈ ಘಟನೆಯಲ್ಲಿ ಮಣ್ಣುಬಿದ್ದ ರಭಸಕ್ಕೆ ರಸ್ತೆ ಬದಿ ನಿಲ್ಲಿಸಿದ್ದ ಎರಡು ಗ್ಯಾಸ್‌ ಟ್ಯಾಂಕರ್‌ಗಳು ನದಿಗೆ ಹೋಗಿ ಬಿದ್ದಿವೆ. ಅನಿಲ ಸೋರಿಕೆ ಅಪಾಯ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯಗೆ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್ ಆಪರೇಷನ್.. ಇದ್ರಲ್ಲಿ ಕಾಂಗ್ರೆಸ್ಸಿನವರು ಇದ್ದಾರೆ: ಸಚಿವ ಯತೀಂದ್ರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement