ಡ್ರಮ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆ : ಒಂದು ವರ್ಷದ ಹಿಂದೆ ಕೊಲೆ ಮಾಡಿರುವ ಶಂಕೆ

ಹೈದರಾಬಾದ್: ಕಳೆದ ತಿಂಗಳು ದೆಹಲಿಯಲ್ಲಿ ತನ್ನ ಪ್ರೇಯಸಿ ಶ್ರದ್ಧಾ ವಾಕರ್ ಅವರನ್ನು ಕೊಂದು ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಆರೋಪದ ಮೇಲೆ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಬಂಧಿಸಿದ ನಂತರ, ದೇಶಾದ್ಯಂತಇದೇ ರೀತಿಯ ಹಲವಾರು ಪ್ರಕರಣಗಳು ವರದಿಯಾಗಿವೆ.
ಈಗ ಬೆಳಕಿಗೆ ಬಂದ ಮತ್ತೊಂದು ಪ್ರಕರಣವೊಂದರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೀಗ ಹಾಕಿದ ಬಾಡಿಗೆ ಮನೆಯೊಳಗೆ ಇರಿಸಲಾಗಿದ್ದ ಡ್ರಮ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಬಾಡಿಗೆದಾರರು ಬಾಡಿಗೆ ಹಣ ಪಾವತಿಸದ ಕಾರಣ ಮನೆಯ ಮಾಲೀಕರು ಮನೆಯ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಮೃತದೇಹದ ಭಾಗಗಳು ಒಂದು ವರ್ಷದಿಂದ ಡ್ರಮ್‌ನಲ್ಲಿ ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಶಾಖಪಟ್ಟಣಂನ ಮಧುರವಾಡದಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮನೆಯಲ್ಲಿದ್ದ ಸಾಮಾನುಗಳನ್ನು ತೆರವುಗೊಳಿಸಲು ಮನೆಯ ಮಾಲೀಕರು ಬಲವಂತವಾಗಿ ಮನೆಗೆ ಪ್ರವೇಶಿಸಿದಾಗ ಇದು ಗೊತ್ತಾಗಿದೆ. ಜೂನ್ 2021 ರಲ್ಲಿ, ಬಾಡಿಗೆದಾರನು ಹೆಂಡತಿಯ ಗರ್ಭಿಣಿಯಾಗಿದ್ದನ್ನು ಉಲ್ಲೇಖಿಸಿ ಬಾಕಿ ಪಾವತಿಸದೆ ಮನೆ ಬಿಟ್ಟಿದ್ದಾನೆ. ಆದರೆ ಈತ ಹಿಂಬಾಗಿಲಿನಿಂದ ಮನೆಗೆ ಕೆಲವೊಮ್ಮೆ ಬಂದಿದ್ದನಾದರೂ ಮಾಲೀಕನಿಗೆ ಹಣ ನೀಡಿರಲಿಲ್ಲ ಎಂದು ಹೇಳಲಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಕಾದ ಬಳಿಕ ಮಾಲೀಕ ಇಂದು ಬಲವಂತವಾಗಿ ಮನೆಗೆ ನುಗ್ಗಿ ಬಾಡಿಗೆದಾರನ ಸಾಮಾನುಗಳನ್ನು ತೆರವುಗೊಳಿಸಿದ್ದಾರೆ. ಸಾಮಾನುಗಳನ್ನು ತೆರವುಗೊಳಿಸುವ ವೇಳೆ ಡ್ರಮ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಈಗ ಅದನ್ನು ವಶಪಡಿಸಿಕೊಳ್ಳಲಾಗಿದೆ,” ವಿಶಾಖಪಟ್ಟಣಂ ನಗರ ಪೊಲೀಸ್ ಆಯುಕ್ತರಾದ ಸಿ.ಎಚ್. ಶ್ರೀಕಾಂತ ಹೇಳಿದರು.
ಪ್ರಾಥಮಿಕ ಪುರಾವೆಗಳು ಒಂದು ವರ್ಷದ ಹಿಂದೆ ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ತೋರಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದು ಅವರ ಹೆಂಡತಿ ಇರಬಹುದು ಎಂದು ನಾವು ಅನುಮಾನಿಸುತ್ತಿದ್ದೇವೆ. (ಮನೆ) ಮಾಲೀಕರು ದೂರು ನೀಡಿದ್ದಾರೆ, ಅದರ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಶ್ರೀಕಾಂತ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಕಾಂಗ್ರೆಸ್ ನಾಯಕನ ʼಬಾಂಬ್ ಶೆಲ್ʼ : ಪಾಕಿಸ್ತಾನವನ್ನು ಗೌರವಿಸಿ...ಇಲ್ಲವಾದ್ರೆ ಅಣುಬಾಂಬ್ ಹಾಕ್ತಾರೆ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್...!

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement