ಬೆಂಗಳೂರು ನಗರದಲ್ಲಿ ಇನ್ಮುಂದೆ ವಾಹನಗಳಿಗೆ ಉಚಿತ ಪಾರ್ಕಿಂಗ್‌ ಇಲ್ಲ

ಬೆಂಗಳೂರು:  ಬೆಂಗಳೂರು ನಗರದಲ್ಲಿ ಇನ್ಮುಂದೆ ಉಚಿತವಾಗಿ ವಾಹನ ನಿಲುಗಡೆಗೆ ಕಡಿವಾಣ ಬೀಳಲಿದೆ. ಬಿಬಿಎಂಪಿಯು, ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್‌) ರೂಪಿಸಿದ್ದ ಹೊಸ ಪಾರ್ಕಿಂಗ್‌ ನೀತಿ-2.0 ಅನ್ವಯ ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.
ಬಿಬಿಎಂಪಿಯ ಎಂಟು ವಲಯಗಳಲ್ಲೂ ಪ್ರತ್ಯೇಕ ಪಾರ್ಕಿಂಗ್‌ ಯೋಜನೆ ರೂಪಿಸಿದ್ದು, ವಾಣಿಜ್ಯ ಪ್ರದೇಶಗಳು, ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್‌ ನಿರ್ವಹಣೆಗೆ ಟೆಂಡರ್‌ ಆಹ್ವಾನಿಸಲಾಗಿದ್ದು, ವಾಹನ ನಿಲುಗಡೆಗೆ ಶುಲ್ಕ ವಿಧಿಸಬೇಕಾಗುತ್ತದೆ. ಪಾರ್ಕಿಂಗ್‌ ಅನ್ನು ವಲಯವಾರು ವಿಂಗಡಣೆ ಮಾಡಲಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಶುಲ್ಕ ನಿಗದಿಪಡಿಸಲಾಗಿದೆ.

ವಾಹನ ನಿಲುಗಡೆ ಕಾರ್ಯನೀತಿ-2.0ಕ್ಕೆ ರಾಜ್ಯ ಸರಕಾರವು 2021ರ ಫೆಬ್ರವರಿ 2ರಂದು ಅನುಮೋದನೆ ನೀಡಿತ್ತು. ವಸತಿ ಪ್ರದೇಶಗಳಲ್ಲಿ ಮನೆಗಳ ಮುಂದೆ ವಾಹನ ನಿಲುಗಡೆ ಮಾಡುವುದಕ್ಕೂ ಶುಲ್ಕಕ್ಕೆ ಪ್ರಸ್ತಾಪಿಸಲಾಗಿತ್ತು. ಹಾಗೂ ಪರವಾನಗಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿತ್ತು. ಆದರೆ, ಪಾಲಿಕೆ ಆಹ್ವಾನಿಸಿರುವ ಟೆಂಡರ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಸದ್ಯಕ್ಕಿಲ್ಲ.
723 ರಸ್ತೆಗಳಲ್ಲಿ ಪಾರ್ಕಿಂಗ್‌
ಪಾಲಿಕೆಯ ಎಲ್ಲ ಎಂಟು ವಲಯಗಳಲ್ಲಿನ 723 ರಸ್ತೆಗಳಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ. ಯಲಹಂಕ ವಲಯದಲ್ಲಿ 60, ಬೊಮ್ಮನಹಳ್ಳಿ 58, ದಾಸರಹಳ್ಳಿ 104, ಮಹದೇವಪುರ 50, ಪೂರ್ವ 59, ರಾಜರಾಜೇಶ್ವರಿನಗರ 58, ದಕ್ಷಿಣ 197 ಮತ್ತು ಪಶ್ಚಿಮ ವಲಯದ 137 ರಸ್ತೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ನಿರ್ವಹಣೆ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ. ವಾಹನ ನಿಲುಗಡೆ ಸ್ಥಳಗಳಲ್ಲಿ ಸೈಕಲ್‌ಗಳಿಗೆ ಜಾಗ ಮೀಸಲಿರಿಸಲಾಗುತ್ತದೆ. ಆದರೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ತಾಳಿ ಕಟ್ಟುವ ವೇಳೆ ಮದುವೆಗೆ ನಿರಾಕರಿಸಿದ ವಧು : ಮಂಟಪದಲ್ಲೇ ಮುರಿದು ಬಿತ್ತು ಮದುವೆ…!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement