ಉಡುಪಿ: ಮಲ್ಪೆ ಕೊಚ್ಚಿನ್ ಶಿಪ್ಯಾರ್ಡ್ ನೌಕರರು ಭಾರತದ ನೌಕಾಪಡೆಗೆ ಸಂಬಂಧಪಟ್ಟ ವಿವಿಧ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಅಕ್ರಮವಾಗಿ ಶೇರ್ ಮಾಡಿ ಲಾಭ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತಿನ ಆನಂದ ತಾಲೂಕಿನ ಕೈಲಾಸ ನಗರದ ಹೀರೇಂದ್ರಕುಮಾರ (34) ಬಂಧಿತ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಈಗ ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ 21ರಂದು ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು.
ರೋಹಿತ್ ಮತ್ತು ಸಂತ್ರಿ ಮಲ್ಪೆಯ ಶಿಪ್ಯಾರ್ಡ್ ಸಹಗುತ್ತಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳಗೌಪ್ಯ ಮಾಹಿತಿಯನ್ನು ವಾಟ್ಸ್ಆ್ಯಪ್ ಮೂಲಕ ಪಾಕಿಸ್ತಾನಕ್ಕೆ ಅಕ್ರಮವಾಗಿ ಹಂಚಿಕೊಂಡು ಲಾಭ ಪಡೆದಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾ ತಂಡವು ಆರೋಪಿಗಳಿಗೆ ಮೊಬೈಲ್ ಸಿಮ್ ಕಾರ್ಡ್ ಒದಗಿಸಿದ ಆರೋಪದ ಮೇಲೆ ಹೀರೇಂದ್ರ ಕುಮಾರ್ನನ್ನು ಬಂಧಿಸಿದೆ. ಈತ ಹಣಕ್ಕಾಗಿ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ಪಡೆದು ಆರೋಪಿಗಳಿಗೆ ನೀಡಿದ್ದ. ಈತನನ್ನು ಕೂಡ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ