ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಒಂದುವಾರ ಲಾಕ್ ಡೌನ್ ವಿಸ್ತರಣೆ ಮಾಡಿದ್ದಾರೆ. ಅಂದರೆ ಜೂನ್.14ರ ಬೆಳಿಗ್ಗೆ 6 ಗಂಟೆಯವರೆಗೆ ವಿಸ್ತರಣೆ ಮಾಡಿದ್ದಾರೆ. ಅಲ್ಲದೆ, 2ನೇ ಹಂತದ ವಿಶೇಷ ಆರ್ಥಿಕ ಪ್ಯಾಕೇಜ್ ಆಗಿ 500 ಕೋಟಿ ಘೋಷಿಸಿದ್ದಾರೆ. ಇದರಲ್ಲಿ ರಾಜ್ಯದ ಅನುದಾನ ರಹಿತ ಶಾಲಾ ಶಿಕ್ಷಕರಿಗೆ, ಸಿಹಿ ಸುದ್ದಿ ನೀಡಿದ್ದು, 5 ಸಾವಿರ ರೂ.ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2ನೇ ಹಂತದಲ್ಲಿ 500 ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು ಸಂಕಷ್ಟದಲ್ಲಿರುವಂತ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ ನೀಡಲಾಗುತ್ತದೆ. ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ವಕೀಲರಿಗೂ ಲಾಕ್ ಡೌನ್ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ ಎಂದರು.
ಮುಜರಾಯಿ ದೇವಸ್ಥಾನದ ಅರ್ಚಕರು, ಅಡುಗೆ ಸಹಾಯಕರಿಗೆ ತಲಾ ಮೂರು ಸಾವಿರ ನೀಡಲು ನಿರ್ಧಾರ ಮಾಡಲಾಗಿದೆ. ಆಶಾ ಕಾರ್ಯಕರ್ತರು ಮೂರು ಸಾವಿರ ನೀಡಲಾಗುತ್ತದೆ. ಇದರಿಂದ 42,574 ಕಾರ್ಯಕರ್ತೆಯರಿಗೆ ಸಹಾಯ ಆಗಲಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 2 ಸಾವಿರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಎಲ್ಲ ಶಾಲೆಗಳು ಮುಚ್ಚಿದ್ದರೂ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಜೂನ್, ಜುಲೈ ಮಾಹೆಯಲ್ಲಿ ಹಾಲಿನ ಪ್ಯಾಕೇಟ್ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ