ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳ ; ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿದ ಸರ್ಕಾರ

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಹೃದಯಘಾತ ಪ್ರಕರಣಗಳ (Heart Attacks) ಸಂಖ್ಯೆ ಹೆಚ್ಚಳವಾಗುತ್ತಿದ್ದು, , ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ರವಿಂದ್ರನಾಥ ಅವರ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆ ಮಾಡಿದೆ.
ಹಾಸನ ಜಿಲ್ಲೆಯ ಜನರ ಸಾವಿನ ಬಗ್ಗೆ ಅಧ್ಯಯನ ನಡೆಸಿ, 10 ದಿನಗಳ ಒಳಗಾಗಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಿಲ್ಲಾ ಆರೋಗ್ಯ ಅಧಿಕಾರಿಗಳ ಮಾಹಿತಿಯ ಪ್ರಕಾರ, ಹಾಸನ ಜಿಲ್ಲೆಯಲ್ಲಿ 40 ದಿನಗಳಲ್ಲಿ 21 ಜನರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಅವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಆಘಾತಕಾರಿ ಸಂಗತಿಯೆಂದರೆ, ಮೃತರಲ್ಲಿ ಐದು ಮಂದಿ ಕೇವಲ 20 ವರ್ಷ ವಯಸ್ಸಿನವರು.
ಇದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಜಯದೇವ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತಜ್ಞರಿಂದ ಅಧ್ಯಯನ ನಡೆಸಿ ವರದಿ ಪಡೆಯುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ದಿನೇಶ ಗುಂಡೂರಾವ್‌ ತಿಳಿಸಿದ್ದಾರೆ.

ಹಠಾತ್ ಹೃದಯಾಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಇತ್ತೀಚೆಗೆ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರ ಬಗ್ಗೆ ಸಮಗ್ರ ಸಂಶೋಧನೆಯ ಅಗತ್ಯವಿದೆ. ಬದಲಾದ ಜೀವನ ಶೈಲಿ, ಆಹಾರ, ಅಸಾಂಕ್ರಾಮಿಕ ರೋಗಗಳು ಹೃದಯಾಘಾತಗಳು ಹೆಚ್ಚಾಗಲು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ, ಹಾಸನದ ಪ್ರಕರಣ ಹಲವು ಪ್ರಶ್ನೆಗಳನ್ನು ಎತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರ ತಂಡದಿಂದ ಅಧ್ಯಯನ ನಡೆಸಿ 10 ದಿನಗಳ ಒಳಗಾಗಿ ವರದಿ ಪಡೆಯಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರ: ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್ ಮಾತ್ರ ಎಂದ ಖರ್ಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement