ಬೆಂಗಳೂರು : ಕನ್ನಡ ಚಿತ್ರರಂಗದ ಪೋಷಕ ನಟರಾದ ಎಂ.ಎಸ್.ಉಮೇಶ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. 80 ವರ್ಷ ವಯಸ್ಸಿನವರಾದ ಉಮೇಶ ಅವರು ಮನೆಯಲ್ಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಯೋ ಸಹಜ ತೊಂದರೆಗಳಿಂದ ಬಳಲುತ್ತಿರುವ ನಟ ಉಮೇಶ ಅವರು ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಮನೆಯಲ್ಲೇ ಜಾರಿ ಬಿದ್ದ ಅವರು ನೋವಿನಿಂದಾಗಿ ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಮುದ್ದಿನಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಕನ್ನಡದ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು ತಮ್ಮ ಹಾಸ್ಯಪಾತ್ರದ ಮೂಲಕ ರಾಜ್ಯದಾದ್ಯಂತ ಜನಪ್ರಿಯತೆ ಪಡೆದಿದ್ದಾರೆ. ಇವರ ಪೂರ್ಣ ಹೆಸರು ಮೈಸೂರು ಶ್ರೀಕಂಠಯ್ಯ ಉಮೇಶ. ಆದರೆ ಕನ್ನಡ ಚಿತ್ರರಂಗದಲ್ಲಿ ಎಂ.ಎಸ್. ಉಮೇಶ ಎಂದೇ ಖ್ಯಾತರಾಗಿದ್ದಾರೆ. ಅರವತ್ತು ವರ್ಷಗಳಿಂದ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಮೊದಲಿಗೆ ಅವರನ್ನು ಮಕ್ಕಳ ರಾಜ್ಯ (1960) ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕಾಗಿ ಆಯ್ಕೆ ಮಾಡಲಾಗಿತ್ತು. ಉಮೇಶ ತಮ್ಮ ವಿಶಿಷ್ಟ ಸಂಭಾಷಣೆ, ಮುಖಭಾವ,ಹಾಸ್ಯ ಹಾಗೂ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. 1977ರಲ್ಲಿ ತೆರೆಕಂಡ ಕಥಾ ಸಂಗಮದಲ್ಲಿ “ತಿಮ್ಮರಾಯ” ಪಾತ್ರವು ಅವರಿಗೆ ಅತ್ಯುತ್ತಮ ಪೋಷಕ ನಟನಿಗಾಗಿ ನೀಡುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿತು. ನಾಗರ ಹೊಳೆ, ಗುರು ಶಿಷ್ಯರು, ಕಾಮನ ಬಿಲ್ಲು, ಅಪೂರ್ವ ಸಂಗಮ, ಶ್ರುತಿ ಸೇರಿದಾಗ, ಮಲಯ ಮಾರುತ, ಹಾಲು ಸಕ್ಕರೆ, ಸಂಕಟದಲ್ಲಿ ವೆಂಕಟ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಉಮೇಶ ನಕ್ಕು ನಗಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ