ಹುಬ್ಬಳ್ಳಿ: ಮಹದಾಯಿ ನೀರಿನ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಬೇಸತ್ತಿರುವ ರೈತರು ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ರೈತ ಹುತ್ಮಾತ್ಮ ದಿನವಾದ ಜುಲೈ 21 ರಿಂದ ಸಾಲ ಮರುಪಾವತಿಯನ್ನು ಬಹಿಷ್ಕರಿಸಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಸಾಲ ಮರುಪಾವತಿ ಬಹಿಷ್ಕರಿಸಿ ಅಭಿಯಾನಕ್ಕೆ ಕಳಸಾ-ಬಂಡೂರಿ, ಮಹದಾಯಿ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾದಾಯಿ ಯೋಜನೆ ಜಾರಿಯಾಗದಿದ್ದರೆ ಬ್ಯಾಂಕ್‍ನಲ್ಲಿ ಮಾಡಿರುವ ಬೆಳೆ ಸಾಲ, ನೀರಾವರಿ ಸಾಲ ಸೇರಿದಂತೆ ವಿವಿಧ ಮಾದರಿಯ ಸಾಲಗಳನ್ನು ತುಂಬದಿರಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಬಜೆಟ್‍ನಲ್ಲಿ ಹಣವಿಟ್ಟು ಸರ್ಕಾರ ನಾಟಕ ಮಾಡುತ್ತಿದೆ. ಡಿಪಿಆರ್ ಮಾಡಿಸಲು ಆಗುತ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಮಹದಾಯಿಯನ್ನು ರಾಜಕೀಯ ದಾಳ ಮಾಡಿಕೊಂಡಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾದಾಯಿ ವಿಷಯವಾಗಿ ನಮ್ಮ ಜೊತೆ ಹೋರಾಟ ಮಾಡಿದ್ದರು. ಪಾದಾಯತ್ರೆ ಮಾಡಿದ್ದರು. ಈಗ ಅವರೇ ಅಧಿಕಾರದಲ್ಲಿದ್ದಾರೆ. ಯಾಕೆ ಯೋಜನೆ ಜಾರಿಗೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ, ಮಹದಾಯಿ ಯೋಜನೆ ಜಾರಿಯಾಗುವ ವರೆಗೂ ನಾಲ್ಕು ಜಿಲ್ಲೆಗಳ ಒಂಬತ್ತು ತಾಲೂಕುಗಳ ರೈತರಿಗೆ ಸಾಲ ತುಂಬದಂತೆ ಜಾಗೃತಿ ಮೀಡಿಸುತ್ತೇವೆ ಎಂದು ಹೇಳಿದರು.
ಯೋಜನೆ ಜಾರಿ ಮಾಡದೆ, ನಮಗೆ ನೀರೆ ನೀಡದೇ ಇದ್ದರೆ ಸಾಲ ತುಂಬುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಸರ್ಕಾರದ ಏನಾದರೂ ಮಾಡಿಕೊಳ್ಳಲಿ, ಮಹದಾಯಿ ಯೋಜನೆ ಜಾರಿಯಾಗುವ ವರೆಗೆ ನಾವು ಸಾಲ ತುಂಬುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಜೂನ್ 21ರಂದು ರೈತ ಹುತಾತ್ಮ ದಿನಾಚರಣೆಯಂದು ಈ ಬಗ್ಗೆ ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ವಿಕಾಸ ಸೊಪ್ಪಿನ ಮಾತನಾಡಿ, ಜೂನ್ 21ರಂದು ರೈತ ಹುತಾತ್ಮ ದಿನಾಚರಣೆಯಂದು ಚಿಕ್ಕ ನರಗುಂದದ ಬಳಿ ಈರಣ್ಣ ಕಡ್ಲಿಕೊಪ್ಪ ಸ್ಮಾರಕದ ಬಳಿ ರೈತ ಮುಖಂಡರೆಲ್ಲ ಒಟ್ಟಾಗಿ ಸಭೆ ಸೇರುತ್ತಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ಮಾಡಲು ಅಣಿಯಾಗುತ್ತಿದ್ದೇವೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ