ಹುಬ್ಬಳ್ಳಿ:ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸಲಿದೆ ಎಂದು ತಜ್ಞರು ಹಾಗೂ ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಆದರೆ ಈ ಬಗ್ಗೆ ಯಾವುದೇ ರೀತಿಯ ಅಧ್ಯಯನಗಳು ಆಗದೇ ಇರುವುದರಿಂದ ಕೂಡಲೇ ಈ ಬಗ್ಗೆ ಅಧ್ಯಯನ ನಡೆಸಲು ವಿಶೇಷ ತಜ್ಞರ ಸಮಿತಿ ರಚಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಬೇರೆ ದೇಶಗಳಲ್ಲಿ ಈಗಾಗಲೇ ಕೋವಿಡ್ ೨ ಮತ್ತು ೩ನೇ ಅಲೆಗಳು ಬಾಧಿಸುತ್ತಿದ್ದು ಎಲ್ಲ ವಯೋಮಾನದವರಿಗೂ ರೋಗ ತಗುಲಿ ಹೆಚ್ಚಿನ ಸಾವು-ನೋವುಗಳು ಸಂಭವಿಸುತ್ತಿದೆ.
ಮೂರನೇ ಅಲೆಗೆ ತುತ್ತಾದ ದೇಶಗಳಲ್ಲಿ ಸಣ್ಣ ಮಕ್ಕಳಿಗೆ ಕೋವಿಡ್ ಹೆಚ್ಚು ಬಂದಿರುವುದು ಹಾಗೂ ಇದರ ಬಗ್ಗೆ ಯಾವುದೇ ಹೆಚ್ಚಿನ ಅಧ್ಯಯನ ಹಾಗೂ ವರದಿಗಳು ಲಭ್ಯವಿಲ್ಲದಿರುವುದರಿಂದ ಈ ಬಗ್ಗೆ ಯಾವುದೇ ಅಧ್ಯಯನಗಳು ಆಗದಿರುವುದರಿಂದ ಕೂಡಲೇ ಈ ಬಗ್ಗೆ ಅಧ್ಯಯನ ನಡೆಸಲು ವಿಶೇಷ ತಜ್ಞರ ಸಮಿತಿ ರಚಿಸಿ ಮಕ್ಕಳಲ್ಲಿ SERO prevalence of antibodies against SARS -COV 2 ಇದರ ಬಗ್ಗೆ ಸಂಪೂರ್ಣ ವರದಿ ಪಡೆದು ನಂತರ ಮಕ್ಕಳ ಮೇಲೆ ಆಗಬಹುದಾದಂತಹ ಪರಿಣಾಮಗಳು ಹಾಗೂ ಕೈಗೊಳ್ಳಬೇಕಾದ ಅವಶ್ಯಕ ಕ್ರಮಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.
ಈಗಾಗಲೇ ಕೋವಿಡ್ ಮೂರನೇ ಅಲೆ ಮಕ್ಕಳನ್ನು ಬಾಧಿಸಬಹುದು ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಈಗಾಗಲೇ ತಜ್ಞರ ಪ್ರತ್ಯೇಕ ಸಮಿತಿ ರಚನೆ ಕುರಿತು ಸರಕಾರದ ಹಂತದಲ್ಲಿ ಕ್ರಮ ವಹಿಸಬಹುದಾಗಿತ್ತು. ಆದರೆ ಇದುವರೆಗೂ ಪ್ರತ್ಯೇಕ ಸಮಿತಿ ರಚನೆಯಾಗಿಲ್ಲ. ಹಲವು ತಜ್ಞರು ನೀಡಿದಂತಹ ಸಲಹೆಗಳು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಿಂದ ಪಾಲಕ-ಪೋಷಕರು ಹಾಗೂ ಶಿಕ್ಷಣ ವ್ಯವಸ್ಥೆ ಅತ್ಯಂತ ಭಯ-ಭೀತರಾಗಿ ಗೊಂದಲದಲ್ಲಿದೆ.ಹೀಗಾಗಿ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಈ ವಿಷಯವಾಗಿ ತಕ್ಷಣ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೊರಟ್ಟಿ ಆಗ್ರಹಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ