ವಿಡಿಯೋ | ಹೈವೇಯಲ್ಲಿ ಧಗಧಗನೆ ಉರಿದ ಕೆಎಸ್‌ಆರ್‌ಟಿಸಿ ‘ಪವರ್ ಪ್ಲಸ್’ ಎಲೆಕ್ಟ್ರಿಕ್ ಬಸ್

ಮೈಸೂರು: ಬ್ರೇಕ್ ಜಾಮ್ ಆದ ಪರಿಣಾಮ ಚಲಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ‘ಪವರ್ ಪ್ಲಸ್’ ಎಲೆಕ್ಟ್ರಿಕ್ (EV) ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಶನಿವಾರ ಮೈಸೂರು-ಹುಣಸೂರು ಮುಖ್ಯ ರಸ್ತೆಯ ಬಿಳಿಕೆರೆ ಸಮೀಪದ ರಂಗಾಯಣಕೊಪ್ಪಲಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ 18 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಗೋಣಿಕೊಪ್ಪ ಹಾಗೂ ಹುಣಸೂರು ಮಾರ್ಗವಾಗಿ ಮೈಸೂರಿನತ್ತ ಬಸ್ ತೆರಳುತ್ತಿತ್ತು. ಸಂಜೆ ಸುಮಾರು 5:15ರ ವೇಳೆಗೆ ಬಿಳಿಕೆರೆ ಹೋಬಳಿಯ ರಂಗಾಯಣಕೊಪ್ಪಲು ಬಳಿ ಬರುತ್ತಿದ್ದಾಗ ಬಸ್‌ನ ಹಿಂಭಾಗದ ಬಲ ಚಕ್ರದ ಬ್ರೇಕ್ ಜಾಮ್ ಆಗಿದೆ.
ಬ್ರೇಕ್ ಜಾಮ್ ಆದ ಪರಿಣಾಮ ಹಿಂಭಾಗದ ಟೈರ್ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಬಸ್ ವೇಗವಾಗಿ ಚಲಿಸುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಚಾಲಕ ರಾಮಚಂದ್ರಯ್ಯ ತಕ್ಷಣ ಬಸ್ ಅನ್ನು ರಸ್ತೆ ಬದಿಗೆ ನಿಲ್ಲಿಸಿ, ಪ್ರಯಾಣಿಕರೆಲ್ಲರಿಗೂ ಕೆಳಗಿಳಿಯುವಂತೆ ಹೇಳಿದ್ದಾರೆ.
ಚಾಲಕನ ಸೂಚನೆಯಂತೆ ಎಲ್ಲ  ಪ್ರಯಾಣಿಕರೂ ಬಸ್‌ನಿಂದ ಇಳಿದಿದ್ದಾರೆ. ನಂತರ ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಆದರೆ ಬಸ್‌ಗೆ ಬೆಂಕಿ ಹೊತ್ತಿಕೊಂಡು ಧಗಧಗ ಉರಿಯಲಾರಂಭಿಸಿದ ನಂತರ ಬಸ್‌ನ ಹಿಂಭಾಗದಲ್ಲಿದ್ದ ಎಂಜಿನ್ ಕ್ಯಾಬಿನ್‌ನ ಬಾಗಿಲು ತೆರೆದು, ಉರಿಯುತ್ತಿದ್ದ ಟೈರ್‌ಗೆ ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಲಾಗಿದೆ.
ಆದರೆ, ಬಲವಾದ ಗಾಳಿಯಿಂದಾಗಿ ಬೆಂಕಿ ಬ್ಯಾಟರಿಗೆ ವ್ಯಾಪಿಸಿ ಮತ್ತಷ್ಟು ತೀವ್ರಗೊಂಡಿದೆ. ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಬಸ್‌ಗೆ ವ್ಯಾಪಿಸಿದ್ದು, ಬಸ್ ಸುಟ್ಟು ಕರಕಲಾಗಿದೆ.
ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಬಸ್ ಬಹುತೇಕ ಸಂಪೂರ್ಣವಾಗಿ ಸುಟ್ಟು ಹೋಗಿತ್ತು.
 ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಬ್ಯಾಟರಿ ಸ್ಫೋಟಿಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಬೆಂಕಿ ಉರಿಯುತ್ತಿದ್ದ ವೇಳೆ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎಲ್ಲ ವಾಹನಗಳನ್ನೂ ತಡೆದು ನಿಲ್ಲಿಸಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ ಬಳಿಕ ಸಂಚಾರವನ್ನು ಪುನರಾರಂಭಿಸಲಾಯಿತು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement