ವಿಧಾನ ಪರಿಷತ್ ಚುನಾವಣೆ : ಕರ್ನಾಟಕದಲ್ಲಿ ಅಧಿಕಾರದಲ್ಲಿದ್ರೂ ಶೂನ್ಯ ಸಂಪಾದನೆ ; ಕಾಂಗ್ರೆಸ್‌ಗೆ ಮುಖಭಂಗ

ಬೆಂಗಳೂರು: ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್‌ ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ   ಹಿನ್ನಡೆ ಅನುಭವಿಸಿದೆ.  ಅದರಲ್ಲೂ ಕರ್ನಾಟಕದಲ್ಲಿ ಆಡಳಿತದಲ್ಲಿದ್ದರೂ ಪಕ್ಷಕ್ಕೆ ಎದುರಾದ ಸೋಲು ಸಂಘಟನಾತ್ಮಕ ಸಾಮರ್ಥ್ಯದ ಕುರಿತು ಪ್ರಶ್ನೆಗಳನ್ನು ಎತ್ತಿದೆ. ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟವು ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಕಾಂಗ್ರೆಸ್‌ಗೆ ಆಘಾತ ನೀಡಿದೆ. ಕಾಂಗ್ರೆಸ್‌ ಹಾಲಿ ವಿಧಾನ ಪರಿಷತ್‌ ಸದಸ್ಯರೊಬ್ಬರೂ ಸೋಲನುಭವಿಸಿರುವುದು ಮತ್ತಷ್ಟು ಹಿನ್ನಡೆಯಾಗಿದೆ.
ಈ ಫಲಿತಾಂಶಗಳು ನಾಲ್ಕೂ ರಾಜ್ಯಗಳ ಜನರ ಒಟ್ಟಾರೆ ರಾಜಕೀಯ ಮನೋಭಾವವನ್ನು ನೇರವಾಗಿ ಪ್ರತಿಬಿಂಬಿಸುತ್ತವೆ ಎಂದು ಹೇಳಲಾಗದಿದ್ದರೂ ತನ್ನದೇ ಆಡಳಿತವಿದ್ದ ಕರ್ನಾಟಕದಲ್ಲಿ ಅದರ ಶೂನ್ಯ ಸಂಪಾದನೆಯನ್ನು ಕಡೆಗಣಿಸುವಂತೆಯೂ ಇಲ್ಲ. ಈ ಚುನಾವಣೆಗಳು ನೋಂದಾಯಿತ ಪದವೀಧರರು ಮತ್ತು ಶಿಕ್ಷಕರನ್ನು ಒಳಗೊಂಡ ಸೀಮಿತ ಮತದಾರರ ವರ್ಗಕ್ಕೆ ಸಂಬಂಧಿಸಿವೆ. ಅಭ್ಯರ್ಥಿಗಳ ವೈಯಕ್ತಿಕ ಪ್ರಭಾವ, ಸ್ಥಳೀಯ ರಾಜಕೀಯ ಸಮೀಕರಣಗಳು, ಸಂಘಟನಾ ಬಲ ಮತ್ತು ಮತದಾರರೊಂದಿಗಿನ ಸಂಪರ್ಕ ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.ಅದರಲ್ಲೂ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ರಾಜಕೀಯವಾಗಿ ಆಕ್ರಮಣಕಾರಿ ಪ್ರಚಾರ ನಡೆಸುತ್ತಿರುವ ಹಾಗೂ ಬ್ಯಾಲೆಟ್‌ ಪೇಪರ್‌ ಮೂಲಕ ಮತದಾನಕ್ಕೆ ಒತ್ತಾಯಿಸುತ್ತಿರುವ ಕಾಂಗ್ರೆಸ್‌ಗೆ, ತನ್ನದೇ ಆಡಳಿತವಿರುವ ಕರ್ನಾಟಕದಲ್ಲಿ ಎದುರಾದ ಸೋಲು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಕರ್ನಾಟಕದಲ್ಲಿ ಬಿಜೆಪಿ–ಜೆಡಿಎಸ್‌ ಕ್ಲೀನ್‌ ಸ್ವೀಪ್‌: ಕಾಂಗ್ರೆಸ್‌ಗೆ ದೊಡ್ಡ ಆಘಾತ
ನಾಲ್ಕು ರಾಜ್ಯಗಳ ಫಲಿತಾಂಶಗಳ ಪೈಕಿ ಕಾಂಗ್ರೆಸ್‌ ಮಟ್ಟಿಗೆ ಕರ್ನಾಟಕದ ಚುನಾವಣೆ ವಿಶೇಷ ಗಮನ ಸೆಳೆದಿದೆ. ಏಕೆಂದರೆ ಇಲ್ಲಿ ಕಾಂಗ್ರೆಸ್‌ 2023ರಿಂದ ಅಧಿಕಾರದಲ್ಲಿದೆ. ಸರ್ಕಾರದ ಆಡಳಿತಾತ್ಮಕ ವ್ಯವಸ್ಥೆ, ಪಕ್ಷದ ಸಂಘಟನಾ ಜಾಲ ಮತ್ತು ರಾಜಕೀಯ ಸಂಪನ್ಮೂಲಗಳ ಬಲ ಹೊಂದಿದ್ದರೂ, ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ವಿಫಲವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದ ನಾಲ್ಕೂ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು, ಈ ಎರಡು ಪಕ್ಷಗಳ ನಡುವಿನ ಚುನಾವಣಾ ಸಮನ್ವಯ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದನ್ನು ತೋರಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್‌ ಸಂಘಟನೆಗೂ ಈ ಫಲಿತಾಂಶ ಸವಾಲಾಗಿ ಪರಿಣಮಿಸಿದೆ. ಪಕ್ಷದ ರಾಜ್ಯಮಟ್ಟದ ಸಂಘಟನೆ ಮತ್ತು ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿ.ಕೆ. ಶಿವಕುಮಾರ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಅಕ್ಟೋಬರ್‌ 23ರಂದು ಮತದಾನ ನಡೆದಿದ್ದು, ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ನಡೆಸುವಂತೆ ಸಚಿವರಿಗೂ ಸೂಚನೆ ನೀಡಲಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಜನಾದೇಶ ಪಡೆದಿರುವ ಪಕ್ಷಕ್ಕೆ ಈ ಫಲಿತಾಂಶವು ಅದರ ನಿರೀಕ್ಷೆಗೆ ವಿರುದ್ಧವಾಗಿದೆ.

ಪ್ರಮುಖ ಸುದ್ದಿ :-   ತದಡಿ ದುರಂತ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ಬೆಂಗಳೂರಿನಲ್ಲಿ ಹಾಲಿ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯನಿಗೆ ಸೋಲು
ಕಾಂಗ್ರೆಸ್‌ಗೆ ಅತ್ಯಂತ ದೊಡ್ಡ ಆಘಾತ ನೀಡಿದ್ದು ಫಲಿತಾಂಶ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಎ.ಪಿ. ರಂಗನಾಥ ಅವರು ಹಾಲಿ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರನ್ನು 908 ಮತಗಳ ಅಂತರದಿಂದ ಸೋಲಿಸಿ ಸ್ಥಾನವನ್ನು ಮೈತ್ರಿಕೂಟದ ಪಾಲಾಗಿಸಿದ್ದಾರೆ.
ಎ.ಪಿ. ರಂಗನಾಥ 10,810 ಮತಗಳನ್ನು ಪಡೆದರೆ, ಪುಟ್ಟಣ್ಣ ಅವರಿಗೆ 9,902 ಮತಗಳು ಲಭಿಸಿವೆ. ಈ ಮೂಲಕ ಈ ಹಿಂದೆ ಕಾಂಗ್ರೆಸ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಜೆಡಿಎಸ್‌ ತನ್ನ ವಶಕ್ಕೆ ಪಡೆದಿದೆ. ಹಾಲಿ ಸದಸ್ಯರೇ ಸೋಲನುಭವಿಸಿರುವುದು ಕಾಂಗ್ರೆಸ್‌ಗೆ ರಾಜಕೀಯವಾಗಿ ಮುಜುಗರ ತಂದಿದೆ. ಅಲ್ಲದೆ, ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾಗಿ ಕಾರ್ಯತಂತ್ರ ರೂಪಿಸಿದಾಗ ಆಡಳಿತಾರೂಢ ಪಕ್ಷಕ್ಕೆ ಪ್ರಬಲ ಸವಾಲು ನೀಡಬಲ್ಲವು ಎಂಬುದನ್ನು ಈ ಫಲಿತಾಂಶ ತೋರಿಸಿದೆ. ಜೊತೆಗೆ ಡಿ.ಕೆ.ಶಿವಕುಮಾರ ಅವರ ಪ್ರಾಬಲ್ಯಕ್ಕೆ ಎಚ್‌.ದಡಿ.ಕುಮಾರಸ್ವಾಮಿ ಸಡ್ಡು ಹೊಡೆಯಬಲ್ಲರು ಎಂಬುದನ್ನೂ ಈ ಈ ಫಲಿತಾಂಶ ತೋರಿಸಿದೆ.
ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ 2028ರಲ್ಲಿ ನಡೆಯಬೇಕಿದ್ದು, ಅದಕ್ಕೂ ಮುನ್ನ ಮೈತ್ರಿಕೂಟಕ್ಕೆ ಈ ಗೆಲುವು ರಾಜಕೀಯ ಆತ್ಮವಿಶ್ವಾಸ ಹೆಚ್ಚಿಸಲಿದೆ. ಕಾಂಗ್ರೆಸ್‌ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದರೆ ಅಧಿಕಾರಕ್ಕೆ ಪರ್ಯಾಯವಾಗಿ ಹೊರಹೊಮ್ಮಬಹುದು ಎಂಬ ಸಂದೇಶವನ್ನು ಬಿಜೆಪಿ–ಜೆಡಿಎಸ್‌ ನಾಯಕರು ಈ ಫಲಿತಾಂಶದ ಮೂಲಕ ಜನತೆಯ ಮುಂದೆ ಬಿಂಬಿಸಲು ಅವಕಾಶ ಪಡೆದಿದ್ದಾರೆ.

ಉಳಿದ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಮೇಲುಗೈ
ಕರ್ನಾಟಕದ ಉಳಿದ ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶಿಲ್‌ ಜಿ. ನಮೋಶಿ ಗೆಲುವು ಸಾಧಿಸಿದರೆ, ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಎಸ್‌.ವಿ. ಸಂಕನೂರು ಜಯಗಳಿಸಿದ್ದಾರೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಕೆ.ಎಂ. ಸುರೇಶ ಗೆಲುವು ದಾಖಲಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಫಲಿತಾಂಶ ವಿಶೇಷವಾಗಿ ಗಮನಾರ್ಹವಾಗಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಪ್ರದೇಶವಾದ ಕಲಬುರಗಿಯೂ ಸೇರಿದೆ. ಖರ್ಗೆ ಅವರ ತವರು ಭಾಗವನ್ನು ಒಳಗೊಂಡ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ಗೆ ರಾಜಕೀಯವಾಗಿ ಮುಜುಗರ ಉಂಟುಮಾಡಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ವಿಧಾನಸಭೆ ಚುನಾವಣೆಯ ಜನಾದೇಶವನ್ನು ಪದವೀಧರರು ಮತ್ತು ಶಿಕ್ಷಕರಂತಹ ಸಂಘಟಿತ ವೃತ್ತಿಪರ ಸಮುದಾಯಗಳ ಬೆಂಬಲವಾಗಿ ಪರಿವರ್ತಿಸಲು ಕಾಂಗ್ರೆಸ್‌ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇನ್ನೊಂದೆಡೆ, ಕರ್ನಾಟಕ ಬಿಜೆಪಿ ಘಟಕದ ನಾಯಕರು ಈ ಫಲಿತಾಂಶವನ್ನು ಕಾಂಗ್ರೆಸ್‌ ಸರ್ಕಾರದ ವಿರುದ್ಧದ ಜನಾಭಿಪ್ರಾಯವೆಂದು ಬಿಂಬಿಸಿದ್ದಾರೆ. ಭ್ರಷ್ಟಾಚಾರ, ಅಕ್ರಮಗಳು ಮತ್ತು ಈಡೇರದ ಭರವಸೆಗಳ ವಿರುದ್ಧ ಮತದಾರರು ತೀರ್ಪು ನೀಡಿದ್ದಾರೆ ಎಂಬುದು ಬಿಜೆಪಿ ನಾಯಕರ ವಾದವಾಗಿದೆ. ಆದರೆ ಈ ಆರೋಪಗಳು ರಾಜಕೀಯ ಪಕ್ಷದ ವ್ಯಾಖ್ಯಾನವಾಗಿದ್ದು, ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶವೊಂದರಿಂದಲೇ ಇಡೀ ರಾಜ್ಯದ ಜನರ ಅಭಿಪ್ರಾಯ ಎಂದು ನಿರ್ಧರಿಸಲಾಗದು ಎಂಬುದನ್ನೂ ಗಮನಿಸಬೇಕಾಗುತ್ತದೆ.

ಪ್ರಮುಖ ಸುದ್ದಿ :-   ವಿಧಾನ ಪರಿಷತ್ ಚುನಾವಣೆ; 4 ಕ್ಷೇತ್ರಗಳಲ್ಲಿ ಎರಡರಲ್ಲಿ ಎನ್‌ಡಿಎ ಗೆಲುವು, ಉಳಿದ ಎರಡರಲ್ಲೂ ಗೆಲುವು ಬಹುತೇಕ ಖಚಿತ

 ರಾಜಕೀಯ ಸಂದೇಶ  
ವಿಧಾನ ಪರಿಷತ್‌ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಅಸ್ತಿತ್ವಕ್ಕೆ ತಕ್ಷಣದ ಅಪಾಯ ಎದುರಾಗುವುದಿಲ್ಲ. ಈ ಚುನಾವಣೆಯಲ್ಲಿ ಮತ ಚಲಾಯಿಸುವವರು ಸೀಮಿತ ವರ್ಗದ ನೋಂದಾಯಿತ ಪದವೀಧರರು ಮತ್ತು ಶಿಕ್ಷಕರಾಗಿರುವುದರಿಂದ, ಇದನ್ನು ಇಡೀ ರಾಜ್ಯದ ಜನರು ನೀಡಿದ ಜನಾದೇಶವೆಂದು ಪರಿಗಣಿಸಲು ಆಗುವುದಿಲ್ಲ.
ಆದರೆ ಆಡಳಿತದಲ್ಲಿರುವ ಪಕ್ಷವು ನಾಲ್ಕೂ ಸ್ಥಾನಗಳನ್ನು ಕಳೆದುಕೊಂಡಿರುವುದು, ಅದರಲ್ಲೂ ಬಲಾಢ್ಯ ಅಭ್ಯರ್ಥಿಯಾಗಿದ್ದು ಗೆಲ್ಲುವ ಕುದುರೆಯಾಗಿದ್ದ ತನ್ನ ಹಾಲಿ ಸದಸ್ಯ ಪುಟ್ಟಣ್ಣ ಅವರ ಸೋಲು ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಿದೆ. ಬಿಜೆಪಿ–ಜೆಡಿಎಸ್‌ ಮೈತ್ರಿಕೂಟಕ್ಕೆ ಇದು ನೈತಿಕ ಬಲ ನೀಡಿದ್ದು, 2028ರ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಪರ್ಯಾಯವಾಗಿ ತನ್ನನ್ನು ಬಿಂಬಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಕೇಂದ್ರ ಸಚಿವರೂ ಆಗಿರುವ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ನಾಲ್ಕೂ ಕ್ಷೇತ್ರಗಳಲ್ಲಿನ ಗೆಲುವನ್ನು 2028ರ ವಿಧಾನಸಭೆ ಚುನಾವಣೆಯ ಜನಾದೇಶದ ಮುನ್ಸೂಚನೆ ಎಂಬ ರೀತಿಯಲ್ಲಿ ಬಿಂಬಿಸಿದ್ದಾರೆ. ಈ ಫಲಿತಾಂಶ ಮೈತ್ರಿಕೂಟದ ಹೆಚ್ಚುತ್ತಿರುವ ಬಲದ ಸಂಕೇತ ಎಂದು ಅವರು ಪ್ರತಿಪಾದಿಸಿದ್ದಾರೆ. ವಿಧಾನ ಪರಿಷತ್‌ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳ ಮತದಾರರ ಸ್ವರೂಪ ಭಿನ್ನವಾಗಿದ್ದರೂ, ಈ ಗೆಲುವು ಮೈತ್ರಿಕೂಟಕ್ಕೆ ಮುಂದಿನ ರಾಜಕೀಯ ಹೋರಾಟಕ್ಕೆ ಹೊಸ ಹುರುಪು ನೀಡಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement