ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರು ತಮ್ಮ ನಿವಾಸಕ್ಕೆ ಬಂದಿದ್ದ ಡೆಲಿವರಿ ಸಿಬ್ಬಂದಿ ಬಲವಂತವಾಗಿ ಮನೆಗೆ ಪ್ರವೇಶಿಸಿ, ಬಳಿಕ ತನ್ನ ಎದುರು ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಮಹಿಳೆ, ಪಾರ್ಸೆಲ್ ತಲುಪಿಸಲು ಮನೆಗೆ ಬಂದಿದ್ದ ಡೆಲಿವರಿ ಸಿಬ್ಬಂದಿ ಶೌಚಾಲಯ ಬಳಸಲು ಅನುಮತಿ ಕೇಳಿದ್ದಾನೆ. ಆದರೆ, ಅಪರಿಚಿತರನ್ನು ಮನೆಗೆ ಒಳಗೆ ಬಿಡುವುದಿಲ್ಲ ಎಂದು ತಾನು ಹಲವು ಬಾರಿ ಸ್ಪಷ್ಟವಾಗಿ ನಿರಾಕರಿಸಿದ್ದಾಗಿ ಮಹಿಳೆ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯಿದ್ದರೆ ಪಕ್ಕದ ಮನೆಯ ಪುರುಷರ ಸಹಾಯ ಕೇಳುವಂತೆ ಸಲಹೆ ನೀಡಿದ್ದರೂ, ಆತ ತನ್ನ ಮಾತನ್ನು ಲೆಕ್ಕಿಸದೆ ಚಪ್ಪಲಿಯನ್ನು ಬಿಚ್ಚಿ ಬಲವಂತವಾಗಿ ಮನೆಗೆ ಪ್ರವೇಶಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದಾದ ಬಳಿಕ ಶೌಚಾಲಯದಿಂದ ಹೊರಬಂದ ಡೆಲಿವರಿ ಸಿಬ್ಬಂದಿ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ.
“ನಾನು ಸಂಪೂರ್ಣವಾಗಿ ಬೆಚ್ಚಿಬಿದ್ದೆ. ಅವಮಾನಿತಳಾದೆ. ನನ್ನ ಮನೆಯಲ್ಲೇ ನನಗೆ ಸುರಕ್ಷತೆ ಇಲ್ಲದಂತಾಯಿತು. ಒಬ್ಬ ಮಹಿಳೆ ‘ಬೇಡ’ ಎಂದು ಹೇಳಿದರೆ ಅದೇ ಅಂತಿಮ ಉತ್ತರವಾಗಬೇಕು. ಆಕೆಯ ಇಚ್ಛೆಯನ್ನು ಮೀರಿ ಯಾರಿಗೂ ಮನೆಗೆ ನುಗ್ಗುವ ಅಥವಾ ಆಕೆಯ ಗಡಿಯನ್ನು ಉಲ್ಲಂಘಿಸುವ ಹಕ್ಕಿಲ್ಲ,” ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಘಟನೆಯ ವೇಳೆ ತನ್ನ ಸುರಕ್ಷತೆಗಾಗಿ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿ, ಮನೆಯ ಮುಖ್ಯ ಬಾಗಿಲನ್ನು ತೆರೆದೆಯೇ ಇಟ್ಟು, ಅಗತ್ಯವಿದ್ದರೆ ಹೊರಗೆ ಓಡಿ ಸಹಾಯ ಕೇಳಲು ಸಾಧ್ಯವಾಗುವಂತೆ ಬಾಗಿಲಿನ ಸಮೀಪ ನಿಂತಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.
“ಪ್ರತಿದಿನ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳ ಸುದ್ದಿಗಳನ್ನು ಕೇಳುತ್ತೇವೆ. ಆ ಕ್ಷಣದಲ್ಲಿ ನನಗೆ ತುಂಬಾ ಭಯವಾಯಿತು. ಈ ಘಟನೆ ನನ್ನನ್ನು ಮಾನಸಿಕವಾಗಿ ತೀವ್ರವಾಗಿ ಕಂಗೆಡಿಸಿದ್ದು, ನನ್ನ ಮನೆಯಲ್ಲೇ ಸುರಕ್ಷಿತವಾಗಿಲ್ಲ ಎಂಬ ಭಾವನೆ ಮೂಡಿಸಿದೆ,” ಎಂದು ಅವರು ಹೇಳಿದ್ದಾರೆ.
ಆರೋಪಿ ಬಂಧನ
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಹಿಳೆ ದೂರಿನ ಆಧಾರದ ಮೇಲೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ