ಮಹಾರಾಷ್ಟ್ರ ಅಣೆಕಟ್ಟಿನಿಂದ ನೀರು ಬಿಡುವ ವಿಚಾರ: ಸಮನ್ವಯದಿಂದ ಉ.ಕರ್ನಾಟಕದಲ್ಲಿ ಪ್ರವಾಹ ತಪ್ಪಿಸಲು ಕರ್ನಾಟಕ-ಮಹಾರಾಷ್ಟ್ರ ಒಪ್ಪಿಗೆ

ಬೆಂಗಳೂರು: ಮಳೆಗಾಲದಲ್ಲಿ ಪ್ರವಾಹದ ಸಂದರ್ಭದಲ್ಲಿ ಮಹಾರಾಷ್ಟ್ರದ ಡ್ಯಾಂಗಳಿಂದ ನೀರು ಬಿಡುವ ಕುರಿತು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ನಡೆದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿ ಸಭೆ ನಡೆಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಗೆ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ, ಗೃಹ ಸಚಿವ ಬಸವರಾಜ ಬೊಮ್ಮಾಯಿ‌, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಮುಖ್ಯವಾಗಿ ಕೃಷ್ಣಾ ಮತ್ತು ಭೀಮಾ ನದಿಗಳ ಜಲಾನಯನ ಪ್ರದೇಶದಲ್ಲಿ ಪರಿಣಾಮಕಾರಿ ಪ್ರವಾಹ ನಿರ್ವಹಣೆಯ ಕುರಿತ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ.
ಸಭೆಯಲ್ಲಿ ಎರಡೂ ರಾಜ್ಯಗಳ ನಡುವೆ ಸಚಿವರು, ಕಾರ್ಯದರ್ಶಿಗಳ ಹಂತ ಹಾಗೂ ತಳಹಂತದ ಅಧಿಕಾರಿಗಳ ನಡುವೆ ಉತ್ತಮ ಸಂವಹನ, ಸಮನ್ವಯ ನಿರ್ವಹಿಸಲು ತೀರ್ಮಾನಿಸಲಾಗಿದೆ. ಎರಡೂ ರಾಜ್ಯಗಳ ನಡುವೆ ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುಗಡೆ ಕುರಿತಂತೆ ಕ್ಷಣಕ್ಷಣದ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಲಾಗಿದೆ.
ಅಣೆಕಟ್ಟುಗಳಿಂದ ನೀರು ಬಿಡುಗಡೆಯ ಬಗ್ಗೆ ಕೂಡಲೇ ಮಾಹಿತಿ ನೀಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಡ್ಯಾಂನಿಂದ ನೀರು ಬಿಟ್ಟ ನಂತರ ಅದು ಅಲ್ಲಿಂದ ರಾಜ್ಯಕ್ಕೆ ಬರಲು 42 ಗಂಟೆಗಳ ಸಮಯ ಬೇಕು. ಈ ಅವಧಿಯಲ್ಲಿ ನಾವು ಇಲ್ಲಿನ ಡ್ಯಾಂಗಳ ನಿರ್ವಹಣೆ ಮಾಡಿಕೊಳ್ಳಬಹುದಾಗಿದೆ. ಅವರು ನೀರು ಬಿಡುವಾಗ ಈ ಬಗ್ಗೆ ನಮಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಭೀಮಾ ನದಿಗೆ ಒಮ್ಮೆಗೇ ನೀರು ಬಿಡದಂತೆ ನಾವು ಮನವಿ ಮಾಡಿದ್ದೆವು. ಈ ಮನವಿಗೆ ಮಹಾರಾಷ್ಟ್ರ ಸರ್ಕಾರ ಸ್ಪಂದಿಸಿದೆ. ಅಲ್ಲದೇ, ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇರುವ ಪ್ರಕರಣದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಕಾನೂನು ಹೋರಾಟ ನಡೆಸಲು ಈ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೂಧ್​ಗಂಗಾ ಯೋಜನೆ ಕಾಮಗಾರಿ ಶೀಘ್ರವೇ ಆಗಲಿದೆ. ಮಹಾರಾಷ್ಟ್ರದಿಂದ ಆಗಬೇಕಾದ ಕೆಲಸಗಳಿಗೂ ಒಪ್ಪಿಗೆ ಸಿಕ್ಕಿದೆ. ಎರಡು ವರ್ಷಗಳಲ್ಲಿ ಕೆಲಸ ಪೂರ್ಣಕ್ಕೆ ಒಪ್ಪಿಕೊಂಡಿದ್ದಾರೆ. ಇದರಿಂದ ಈ ಭಾಗದ ಜನರ ನೀರಾವರಿ ಸೌಲಭ್ಯ ಹೊಂದುವ ಆಕಾಂಕ್ಷೆ ನೆರವೇರಲಿದೆ. ಈ ವರ್ಷ ಬಜೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ಹಣ ಇಟ್ಟಿದೆ. ಹೀಗಾಗಿ ಕೆಲಸ ಚುರುಕಾಗಿ ಆಗಲಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement