
ಕಲಬುರ್ಗಿ: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಹಗರಣದ ಪ್ರಮುಖ ಆರೋಪಿ ಹಾಗೂ ಬಿಜೆಪಿ ನಾಯಕಿಯಾಗಿದ್ದ ದಿವ್ಯಾ ಹಾಗರಗಿ ಪತಿ ಕಲಬುರ್ಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷ ರಾಜೇಶ್ ಹಾಗರಗಿಗೆ ಹೈಕೋರ್ಟ್‌ನ ಕಲಬುರ್ಗಿ ಪೀಠವು ಮಂಗಳವಾರ ಜಾಮೀನು ನೀಡಿದೆ.
ಹಗರಣದ ಪ್ರಮುಖ ಆರೋಪಿ ದಿವ್ಯಾ ಪತಿ ಎಂಬ ಕಾರಣಕ್ಕೆ ಅರ್ಜಿದಾರ ಆರೋಪಿಗೆ ಜಾಮೀನು ನಿರಾಕರಿಸಲಾಗದು ಎಂದು ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿದೆ.

ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪತಿ ಎಂಬ ಆಧಾರದ ಮೇಲೆ ಆರೋಪಿ ರಾಜೇಶ್ ಜಾಮೀನಿಗೆ ಅರ್ಹರಲ್ಲ ಎಂದು ಹೇಳಲಾಗದು. ಆರೋಪ ಸಾಬೀತುಪಡಿಸುವ ದಾಖಲೆಗಳು ಇರಬೇಕು. ಐಪಿಸಿ ಸೆಕ್ಷನ್ 212 (ಆಶ್ರಯ ಅಥವಾ ನೆರವು ನೀಡುವುದು) ಹೊರತುಪಡಿಸಿ, ಅರ್ಜಿದಾರ ಆರೋಪಿ ವಿರುದ್ಧ ಗಂಭೀರ ಆರೋಪ ಕಾಣುತ್ತಿಲ್ಲ” ಎಂದು ಹೇಳಿದ ಪೀಠವು ಜಾಮೀನು ಮಂಜೂರು ಮಾಡಿತು.
ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವಂತಿಲ್ಲ. ವ್ಯಾಪ್ತಿ ಹೊಂದಿದ ಪೊಲೀಸ್ ಠಾಣೆಯಿಂದ ಅನುಮತಿ ಇಲ್ಲದೆ ಹೊರಹೋಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯವು ರಾಜೇಶಗೆ ವಿಧಿಸಿದೆ.
ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ರಾಜೇಶ್ ಹಾಗರಗಿ ಅವರನ್ನು 2022ರ ಏಪ್ರಿಲ್ 7ರಂದು ಬಂಧಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯವು ಅವರ ಜಾಮೀನು ಅರ್ಜಿ ವಜಾ ಮಾಡಿತ್ತು. ಆನಂತರ ಹೈಕೋರ್ಟ್ ಸಹ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಅರ್ಜಿದಾರರ ಪಾತ್ರದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಜಾಮೀನು ನಿರಾಕರಿಸಿತ್ತು. ಈಗ ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸಿದ್ದು, ಅರ್ಜಿದಾರರ ಮನವಿ ಪುರಸ್ಕರಿಸಿ ಜಾಮೀನು ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ