ಹೊಲದಲ್ಲಿ ಮಲಗಿದ್ದ ಮಹಿಳೆ ಮೈಮೇಲೆ ಹೆಡೆ ಎತ್ತಿ ನಿಂತ ಸರ್ಪ…!

ಕಲಬುರಗಿ: ಹೊಲದಲ್ಲಿ ಮಲಗಿದ್ದ ಮಹಿಳೆಯೊಬ್ಬಳ ಮೇಲೆ ಹಾವು ಹೆಡೆ ಎತ್ತಿ ನಿಂತ ಅಪರೂಪದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ವಿಸ್ಮಯಕಾರಿ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಅಪರೂಪದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ ಗ್ರಾಮದಲ್ಲಿ ನಡೆದಿದೆ. ಭಾಗಮ್ಮ ಬಡದಾಳ ಎಂಬ ಮಧ್ಯವಯಸ್ಸಿನ ಮಹಿಳೆ, ಮಧ್ಯಾಹ್ನದ ಹೊತ್ತಲ್ಲಿ ತನ್ನ ಹೊಲದಲ್ಲಿ ಮರದ ನೆರಳಲ್ಲಿ ಮಲಗಿದ್ದಾಳೆ. ಹಾಗೂ ಕೆಲವೇ ಹೊತ್ತಲ್ಲಿ ನಿದ್ರೆಗೆ ಜಾರಿದ್ದಾಳೆ. ಕೆಲ ಸಮಯದ ನಂತರ ಮೈ ಮೇಲೆ ಏನೋ ಬಂದಂತಾಗಿ ಕಣ್ಣು ಬಿಟ್ಟು ನೋಡಿದ್ದಾಳೆ. ಆಗ ಕಂಡ ದೃಶ್ಯ ನೋಡಿ ಅವಳಿಗೆ ಮಾತೇ ಹೊರಬರದಂತಾಗಿದೆ. ಯಾಕೆಂದರೆ ದೊಡ್ಡ ನಾಗರ ಹಾವೊಂದು ಅವಳ ಮೈ ಮೇಲೆಯೇ ಹೆಡೆ ಎತ್ತಿ ನಿಂತಿದೆ.

ಹಾವು ಮೈ ಮೇಲೆ ಹತ್ತಿ ಹೆಡೆ ಎತ್ತಿ ನಿಂತಿರುವುದನ್ನು ಕಂಡು ಕಂಗಾಲಾದ ಮಹಿಳೆ ಹಾವು ಹೋಗಬಹುದು ಎಂದು ಸುಮ್ಮನೆ ಮಲಗಿದ್ದಾಳೆ. ಆದರೂ ಸರ್ಪ ಮಾತ್ರ ಹೋಗಿಲ್ಲ. ಎಲ್ಲಾದರೂ ಕದಲಿದರೆ ಕಚ್ಚಿ ಬಿಟ್ಟರೆ ಎನ್ನುವ ಭಯಕ್ಕೆ ಮಹಿಳೆ ಕದಲದೇ ಶವದ ಹಾಗೆಯೇ ಮಲಗಿದ್ದಾಳೆ. ಮನಸ್ಸಿನಲ್ಲಿಯೇ ದೇವರ ಜಪ ಬೇರೆ ಶುರು ಮಾಡಿದ್ದಾಳೆ.

ಪ್ರಮುಖ ಸುದ್ದಿ :-   ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

ಇದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಈ ದೃಶ್ಯ ನೋಡಿ ಹೌಹಾರಿದ್ದಾನೆ. ಅಲ್ಲದೇ ಹೊಲದಲ್ಲಿದ್ದ ತನ್ನ ಇನ್ನೊಬ್ಬ ಸ್ನೇಹಿತನಿಗೆ ಕರೆದು ತೋರಿಸಿದ್ದಾನೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಸಹ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ನಂತರ ಸರ್ಪ ತನ್ನ ಪಾಡಿಗೆ ತಾನು ಅಲ್ಲಿಂದ ತೆರಳಿದೆ. ಅಕ್ಷರಶಃ ಬೆವೆತು ಹೋಗಿದ್ದ ಭಾಗಮ್ಮ ಸರ್ಪ ಹೋದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement