ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ಅವರು ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ನಾಲ್ಕು ದಿನಗಳಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ, ಆದರೆ ಇಂದು, ಶನಿವಾರ ಸಂಜೆ 4:30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಚೆನ್ನಮ್ಮ ಅವರು ಮೂಲತಃ ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿಯವರು. ಹಳೆಕೋಟೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. 1954ರಲ್ಲಿ ಎಚ್.ಡಿ. ದೇವೇಗೌಡರ ಜತೆ ಇವರ ವಿವಾಹ ನಡೆಯಿತು. ದಂಪತಿಗೆ ಎಚ್. ಡಿ. ರೇವಣ್ಣ, ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಚೆನ್ನಮ್ಮ ಅವರು ದೇವೇಗೌಡರ ರಾಜಕೀಯ ಏಳು-ಬೀಳುಗಳಲ್ಲಿ ಮತ್ತು ಸಾಂಸಾರಿಕ ಜೀವನದಲ್ಲಿ ಜೊತೆಯಾಗಿ ನಿಂತು ಕುಟುಂಬವನ್ನು ನಿರ್ವಹಿಸಿದವರು. ಇವರ ತ್ಯಾಗ ಮತ್ತು ತಾಳ್ಮೆಯನ್ನು ಸ್ವತಃ ದೇವೇಗೌಡರು ಹಲವು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದಾರೆ.
ಚನ್ನಮ್ಮ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು
2001ರ ಫೆಬ್ರವರಿ ತಿಂಗಳಲ್ಲಿ ಚನ್ನಮ್ಮ ಅವರು ಹರದನಹಳ್ಳಿಯಲ್ಲಿ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ