ಚೆನ್ನೈ: ಶಾರ್ಜಾದಿಂದ ಚೆನ್ನೈಗೆ ಆಗಮಿಸುತ್ತಿದ್ದ ಏರ್ ಅರೇಬಿಯಾ ವಿಮಾನದಲ್ಲಿದ್ದ 34 ವರ್ಷದ ಪ್ರಯಾಣಿಕನೊಬ್ಬ, ವಿಮಾನವು ಲ್ಯಾಂಡ್ ಆಗಿ ನಿಧಾನವಾಗಿ ಚಲಿಸುತ್ತಿರುವಾಗ ತುರ್ತು ನಿರ್ಗಮನ ಬಾಗಿಲನ್ನು ತೆರೆದು ಕೆಳಗೆ ಹಾರಿದ ಘಟನೆಯೊಂದು ಭಾನುವಾರ ಬೆಳಿಗ್ಗೆ ವರದಿಯಾಗಿದೆ. ಈ ಆಘಾತಕಾರಿ ಘಟನೆಯಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ದಂಗಾಗಿದ್ದಾರೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, 231 ಪ್ರಯಾಣಿಕರನ್ನು ಹೊತ್ತಿದ್ದ ಈ ವಿಮಾನವು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಮುಖ್ಯ ರನ್‌ವೇ ದಾಟಿ ಟ್ಯಾಕ್ಸಿವೇಯಲ್ಲಿ ವಿಮಾನವು ನಿಧಾನವಾಗಿ ಚಲಿಸುತ್ತಿದ್ದಾಗ (ಸಂಪೂರ್ಣವಾಗಿ ನಿಲ್ಲುವ ಮುನ್ನವೇ) ಈ ಘಟನೆ ನಡೆದಿದೆ. ಇದರಿಂದಾಗಿ ವಿಮಾನದ ಒಳಗಡೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಪ್ರಯಾಣಿಕನ ಅಸ್ವಸ್ಥತೆ ಕಾರಣ?
ಘಟನೆಯ ಕುರಿತು ಮಾತನಾಡಿರುವ ಹಿರಿಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, “ವಿಮಾನವು ಚಲನೆಯಲ್ಲಿರುವಾಗಲೇ ಆತ ಜಿಗಿದಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ ಹಾಗೂ ವಿಮಾನಕ್ಕೂ ಯಾವುದೇ ಹಾನಿಯಾಗಿಲ್ಲ,” ಎಂದು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಯಾಣಿಕ ವಿಮಾನ ಪ್ರಯಾಣದ ವೇಳೆ ಅಸ್ವಸ್ಥನಾಗಿದ್ದನು. ಆತ ವಾಂತಿಯಿಂದ ಬಳಲುತ್ತಿದ್ದು, ಎರಡು ಬಾರಿ ವಾಂತಿ ಮಾಡಿಕೊಂಡಿದ್ದ. ಆತನ ಅನಾರೋಗ್ಯದ ಸ್ಥಿತಿಯೇ ಈ ರೀತಿಯ ವಿಚಿತ್ರ ವರ್ತನೆಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಸ್ಪಂದಿಸಿದ ಭದ್ರತಾ ಸಿಬ್ಬಂದಿ
ಈ ಅನಿರೀಕ್ಷಿತ ಘಟನೆಯನ್ನು ಗಮನಿಸಿದ ಪೈಲಟ್ ತಕ್ಷಣವೇ ಗ್ರೌಂಡ್ ಮೇಲಿದ್ದ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿ, ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಭದ್ರತಾ ಲೋಪದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಮುಖ್ಯ ರನ್‌ವೇಯನ್ನು ಬೆಳಿಗ್ಗೆ 03:23 ರಿಂದ 04:23 ರವರೆಗೆ ಸುಮಾರು ಒಂದು ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು. ಈ ವೇಳೆ ಇತರೆ ವಿಮಾನಗಳನ್ನು ಬೇರೆ ರನ್‌ವೇ ಗೆ ತಿರುಗಿಸಲಾಯಿತು.
ಅಧಿಕೃತ ಮೂಲಗಳ ಪ್ರಕಾರ, ಪ್ರಯಾಣಿಕನ ಗುರುತು ಇನ್ನೂ ಖಚಿತವಾಗಿಲ್ಲವಾದರೂ, ಆತ ತಮಿಳುನಾಡಿನ ಮೂಲದವನೆಂದು ಹೇಳಲಾಗಿದೆ. ಈ ಭದ್ರತಾ ಉಲ್ಲಂಘನೆ ಮತ್ತು ಸುರಕ್ಷತಾ ಲೋಪದ ಕುರಿತು ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ