ಯಲ್ಲಾಪುರ: ಕಲಾರಾಧನೆ ಮಾಡುತ್ತ ಸಂಕಲ್ಪ ಸಂಸ್ಥೆ ಬೆಳೆದು ಬಂದಿದೆ,ಉತ್ಸವವೂ ನಿರಂತರವಾಗಿರುತ್ತದೆ ಎಂದು ಶಿರಳಗಿ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ನುಡಿದರು.
ಅವರು ಭಾನುವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಾಂಧಿ ಕುಟೀರದಲ್ಲಿ 39 ನೇ ಸಂಕಲ್ಪ ಉತ್ಸವದಲ್ಲಿ ಸಾಧಕರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಂಕಲ್ಪ ಜ್ಞಾನ ಯಜ್ಞದ ಮೂಲಕ ಭಗವಂತನನ್ನು ಆರಾಧಿಸುವ ಕಲೆಯ ಆರಾಧನೆಯ ಮೂಲಕ ಸಮಾಜಿಕ ಪರಿವರ್ತನೆಯಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದು ಹೆಮ್ಮೆ ಪಡುವಂಥದ್ದು. ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವೂ ಕೂಡ ಅಷ್ಟೇ ಮುಖ್ಯವಾದದ್ದು ಎಂದರು.
ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಈ ಸಲ ಸಂಕಲ್ಪ ಉತ್ಸವದಲ್ಲಿ ಯತಿಗಳಿಂದ ಮಾರ್ಗದರ್ಶನ ಮಾಡಿಸುವ ಕೆಲಸ ವಾಗುತ್ತಿದೆ. ವೃತ್ತಿಯ ಪಾವಿತ್ರ್ಯತೆ ಮತ್ತು ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ಹೆಸರು ಉಳಿಸಿಕೊಂಡು ಬಂದವರಿಗೆ ಸಂಕಲ್ಪ ಪ್ರಶಸ್ತಿ ಸಂದಿದೆ. ಇವರೆಲ್ಲ ನನ್ನದೇ ಶಿಷ್ಯರಾದವರು ಎಂಬ ಹೆಮ್ಮೆಯೂ ನನಗಿದೆ ಎಂದರು.
ಶ್ರೀಗಳಿಂದ ಸಂಕಲ್ಪ ಪ್ರಶಸ್ತಿ ಪ್ರದಾನ
ಪತ್ರಿಕಾರಂಗ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಪತ್ರಕರ್ತರಾದ ನರಸಿಂಹ ಸಾತೊಡ್ಡಿ, ಹಾಗೂ ಬರಹಗಾರ, ಪತ್ರಕರ್ತ ಸುಬ್ರಾಯ ಬಿದ್ರೆಮನೆ ಅವರಿಗೆ ಶ್ರೀ ಬ್ರಹ್ಮಾನಂದ ಭಾರತೀ ಶ್ರೀಗಳು ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿದರು.
ರೈತ ಮುಖಂಡ ಪಿ.ಜಿ. ಭಟ್ಟ ಬರಗದ್ದೆ, ಸಹಕಾರಿ ಪಿ.ಜಿ. ಹೆಗಡೆ ಕಳಚೆ, ಸಂಕಲ್ಪ ಉಪಾಧ್ಯಕ್ಷ ಪ್ರಶಾಂತ ಹೆಗಡೆ, ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ, ರಾಮಚಂದ್ರ ಚಿಕ್ಯಾನಮನೆ ಉಪಸ್ಥಿತರಿದ್ದರು. ಶಿಕ್ಷಕ ಜೈರಾಮ ಭಟ್ಟ ನಿರೂಪಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ