ಕೇಂದ್ರ ಬಜೆಟ್‌ 2025 | ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ, ಕಳಸಾ-ಬಂಡೂರಿ ಯೋಜನೆ ಪ್ರಸ್ತಾಪಿಸದೆ ರಾಜ್ಯಕ್ಕೆ ಅನ್ಯಾಯ; ವಸಂತ ಲದವಾ

 ಹುಬ್ಬಳ್ಳಿ: ಕೇಂದ್ರದ 2025-26 ಮುಂಗಡಪತ್ರ ಅತ್ಯಂತ ನಿರಾಶದಾಯಕ, ದೇಶದ ಬಹುತೇಕ ಜನತೆಗೆ ಯಾವುದೇ ಅಪೇಕ್ಷಿತ, ನಿರೀಕ್ಷಿತ ಯೋಜನೆಗಳಿಲ್ಲ. ಅದರಲ್ಲಿಯೂ ಕರ್ನಾಟಕದ ಮಟ್ಟಿಗೆ ಅತ್ಯಂತ ನಿರಾಶದಾಯಕ ಬಜೆಟ್‌ ಆಗಿದೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಹೇಳಿದ್ದಾರೆ.
ಹುಬ್ಬಳ್ಳಿ- ಅಂಕೋಲಾ ಮಾರ್ಗದ ಪ್ರಸ್ತಾಪವೇ ಇಲ್ಲ.
164.44 ಕಿಲೋಮೀಟರ್ ಉದ್ದದ  ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಯೋಜನೆ ಈಗಾಗಲೇ 117 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಕಲಘಟಗಿ ಮಧ್ಯ 47 ಕಿ.ಮೀ ಮಾರ್ಗ ಅಭಿವೃದ್ದಿ ಪಡಿಸಿದ್ದರೂ ಕಾಮಗಾರಿ ಸ್ಥಗಿತಗೊಂಡಿದೆ. ಉತ್ತರ ಕರ್ನಾಟಕದ 16 ಜಿಲ್ಲೆಗಳ ಸುಮಾರು ಮೂರು ಕೋಟಿ ನಲವತ್ತು ಲಕ್ಷ ಜನ ನಿರೀಕ್ಷೆಯಲ್ಲಿದ್ದರೂ ಮೂಲಭೂತ ಸೌಕರ್ಯಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸ್ಥಳೀಯ, ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಅತ್ಯವಶ್ಯ ಮತ್ತು ಅನಿವಾರ್ಯವಾಗಿದೆ. ರಾಜ್ಯದ 80 ತಾಲೂಕುಗಳಿಗೆ ಸೌಲಭ್ಯದಿಂದ ವಂಚಿತರಾಗಿ ಮುಖ್ಯವಾಹಿನಿಯಿಂದ ದೂರವಾಗಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆ, ರಾಜ್ಯದ ಅತಿ ಕಡಿಮೆ ಜನಸಂಖ್ಯೆ ಸಾಂದ್ರತೆಯುಳ್ಳ ಜಿಲ್ಲೆ ಆಗಿದೆ.
ಈ ಯೋಜನೆಗೆ ಅವಶ್ಯವಿರುವುದು ಕೇವಲ 138 ಹೆಕ್ಟರ್ ಅರಣ್ಯ ಪ್ರದೇಶ ಮಾತ್ರ. 164.44 ಕಿಲೋಮೀಟರ್ ಉದ್ದದ ಈ ಯೋಜನೆಯಲ್ಲಿ 105 ಕಿ.ಮೀ ಅರಣ್ಯವಿಲ್ಲದ ಬಯಲು ಪ್ರದೇಶವಿದೆ. 20 ಕಿ.ಮೀ ಸುರಂಗ ಮಾರ್ಗ, 20 ಕಿ.ಮೀ ಅರಣ್ಯವಿಲ್ಲದ ಗುಡ್ಡಗಾಡು ಪ್ರದೇಶವಿದೆ. ಕೇವಲ 23 ಕಿ.ಮೀ ಉದ್ದ ಅರಣ್ಯ ಪ್ರದೇಶದ ಅವಶ್ಯಕತೆ ಇದೆ.  ಕೇವಲ 1ರಷ್ಟು ಅರಣ್ಯ ಪ್ರದೇಶ ಅತ್ಯಂತ ಅವಶ್ಯಕವಾದ ಮೂಲಭೂತ ಸೌಕರ್ಯ, ಅಭಿವೃದ್ಧಿಗಾಗಿ ಉಪಯೋಗಿಸಲ್ಪಟ್ಟರೆ ಪರಿಸರ ಅಥವಾ ಕಾಡು ಪ್ರಾಣಿಗಳಿಗೆ ಯಾವುದೇ ವ್ಯತ್ಯಾಸ ಆಗದು ಎಂದು ಅವರು ಹೇಳಿದ್ದಾರೆ.
ಇದೇ ಕಾರಣಕ್ಕಾಗಿ ರಚಿಸಿದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಟಿ ವಿ ರಾಮಚಂದ್ರ ರವರು ನೀಡಿದ ವರದಿ ಇದಕ್ಕೆ ಪೂರಕವಾಗಿದೆ.  ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಲ ವಿದ್ಯುತ್ ಶಕ್ತಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ 1980-81ರಲ್ಲಿ ಮಂಜುರಾತಿ ನೀಡಿದೆ.
ಕೊಂಕಣ ರೈಲ್ವೆ ಯೋಜನೆಗಳಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮಂಜುರಾತಿ ನೀಡಿದೆ. ಪರಿಸರವಾದಿ  ರಾಜೇಶ ಭಟ್‌  ಅವರು ಮಾಹಿತಿ ಹಕ್ಕಿನಡಿ ಕೋರಿರುವ ಮಾಹಿತಿ ಅಧಿನಿಯಮದಡಿ ದಿನಾಂಕ್ 27/10/2021ರಂದು ಪೂರೈಸಿದ ಅಧಿಕೃತ ಮಾಹಿತಿ ದಾಖಲೆಗಳು ಇಲಾಖೆಯಲ್ಲಿವೆ. ಆದರೆ ಕೇಂದ್ರದ ಮುಂಗಡಪತ್ರದಲ್ಲಿ ಈ ಯೋಜನೆಗೆ ಯಾವುದೇ ಪ್ರಸ್ತಾಪವಿಲ್ಲದೆ ಪೂರಕ ಹಣಕಾಸು ಒದಗಿಸದೆ, ಕಾರ್ಯ ಆರಂಭ ಹಾಗೂ ಸೂಚನೆ ಇಲ್ಲ ದಿರುವುದರಿಂದ ಬಹುಕಾಲದಿಂದ ನಿರೀಕ್ಷಣೆಯಲ್ಲಿದ್ದ  ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜನರಿಗೆ  ಅತ್ಯಂತ ನಿರಾಸೆ ತಂದಿದೆ ಎಂದು ಹೇಳಿದ್ದಾರೆ.
ಇದೇ ಪ್ರಕಾರ ಉತ್ತರ ಕರ್ನಾಟಕದ ಕಳಸಾ ಬಂಡೂರಿ ನಾಲಾ ತಿರುವು ಯೋಜನೆ ಕೂಡ ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ.  ಉತ್ತರ ಕರ್ನಾಟಕದ ಜೊತೆಗೆ ಹುಬ್ಬಳ್ಳಿ ಧಾರವಾಡ ಮಹಾನಗರದ ಕುಡಿಯುವ ನೀರಿನ ಏಕೈಕ ಈ ಯೋಜನೆಯನ್ನು ಕೂಡ ಮುಂಗಡಪತ್ರದಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ. 1980 ರಲ್ಲಿ ದಿ. ಗುಂಡೂ ರಾಯರ ಕಾಂಗ್ರೆಸ್ ಸರ್ಕಾರ ಮೊದಲ ಬಾರಿಗೆ ಮಹದಾಯಿ ಮಲಪ್ರಭಾ  ಯೋಜನೆ ಪ್ರಸ್ತಾಪಿಸಿತ್ತು. 2001ರಲ್ಲಿ ಕಳಸಾ ಬಂಡೂರಿ ನಾಲಾ ತಿರುವು ಯೋಜನೆ ಹಮ್ಮಿಕೊಂಡಿತು. 30/04/2002 ರಂದು ಜಲ ಸಂಪನ್ಮೂಲ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ಪಡೆದಿತ್ತು. ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ ವಿಭಾಗದಿಂದ ನಿರಪೇಕ್ಷಣ ಪತ್ರ ಪಡೆದಿತ್ತು. ಯೋಜನೆಗೆ ಈ ಅಧಿಸೂಚನೆ 2000ರ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡಿತ್ತು. ಭಾಗಶಃ ಕಾಮಗಾರಿಯನ್ನೂ ಕೂಡ ಕೈಗೊಳ್ಳಲಾಗಿತ್ತು ಆದರೆ 2002 ರಂದು ಅನುಮತಿ ಸ್ಥಗಿತಗೊಳಿಸಿತ್ತು. ಉತ್ತರ ಕರ್ನಾಟಕದ ಅನಿವಾರ್ಯವಾಗಿದ್ದ, ಮತ್ತು ಈ ಭಾಗದ ಜನರು ನಾಲ್ಕು ದಶಕಗಳಿಂದ ಒತ್ತಾಯಿಸುತ್ತಿರುವ ಈ ಯೋಜನೆ ಬಗ್ಗೆ ಈಗ ಈ ಭಾಗದ ಲಕ್ಷಾಂತರ ಜನರ ಕುಡಿಯುವ ನೀರಿನ ಈ ಯೋಜನೆಗೆ ಮುಂಗಡಪತ್ರದಲ್ಲಿ ಯಾವುದೇ ಪ್ರಸ್ತಾಪವಿಲ್ಲದೆ, ಯಾವುದೇ ಪೂರಕ, ಹಣಕಾಸು ಪ್ರಸ್ತಾಪಿಸದೆ ನಿರಾಸೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ  ಹಿಂದಿನ ಅಧ್ಯಕ್ಷರಾದ ವಸಂತ ಲದವಾ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement