ಬೆಳಗಾವಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಕಾರ್ಕರ್ತರ ನಡುವೆ ಗದ್ದಲ ನಡೆದಿದ್ದು, ಪರಸ್ಪರ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ ಘಟನೆ ಬೆಳಗಅವಿಯಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ಮಧ್ಯಾಹ್ನ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ನಡೆದ ಸಭೆ ನಡೆದಿತ್ತು. ಈ ಸಭೆಯಲ್ಲಿ ಎಐಸಿಸಿ ವೀಕ್ಷಕ ಮನೋಜ ಚವ್ಹಾಣ ಅವರು ಸಹ ಪಾಲ್ಗೊಂಡಿದ್ದರು. ಅವರ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ.
ಈ ವೇಳೆ ಮಾಜಿ ಶಾಸಕ ರಮೇಶ ಕುಡಚಿ ಅವರ ಆಪ್ತರೊಬ್ಬರನ್ನು ಕೆಲ ಕಾರ್ಯಕರ್ತರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎಐಸಿಸಿ ಕಾರ್ಯದರ್ಶಿಗಳು ಎಷ್ಟೇ ಮನವಿ ಮಾಡಿದರೂ ಕಿವಿಗೊಡದ ಕಾರ್ಯಕರ್ತರು ಎಐಸಿಸಿ ವೀಕ್ಷಕರ ಮುಂದೆಯೇ ಜಗಳವಾಡಿದ್ದಾರೆ.
ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಇದೆ. ಈ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಸಭೆ ಆಯೋಜಿಸಲಾಗಿತ್ತು ಎಂದು ಹೇಳಲಾಗಿದೆ. ಸಭೆಯಲ್ಲೆ ಬಣ ರಾಜಕೀಯ ತೀವ್ರಗೊಂಡು ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಖಂಡರು ಹರಸಾಹಸಪಟ್ಟರು.
ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು ಎನ್ನಲಾಗಿದೆ. ಸಭೆಯಲ್ಲಿ ಹಲವಾರು ಕಾಂಗ್ರೆಸ್ ನಾಯಕರು ಇದ್ದರು.


ನಿಮ್ಮ ಕಾಮೆಂಟ್ ಬರೆಯಿರಿ