ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ಗುರುವಾರ(ಆಗಸ್ಟ್ 15) ನೆಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ‘ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ನಾನೇ ಅಭ್ಯರ್ಥಿ’ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ. ಚನ್ನಪಟ್ಟಣದಲ್ಲಿ ಪ್ರಥಮ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ಡಿ.ಕೆ. ಶಿವಕುಮಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದಾರೆ.
ನಾನು ಕಳೆದ ಐದು ವರ್ಷಗಳಿಂದ ರಾಮನಗರದಲ್ಲಿ ಧ್ವಜಾರೋಹಣ ಮಾಡಿದ್ದೇನೆ. ಚನ್ನಪಟ್ಟಣದ ಬಗ್ಗೆ ಅಧಿಕಾರಿಗಳ ಬಳಿ ಕೇಳಿದಾಗ ಆರು ವರ್ಷಗಳಿಂದ ಚನ್ನಪಟ್ಟಣದಲ್ಲಿ ಜನಪ್ರತಿನಿಧಿಗಳು ಬಂದು ಧ್ವಜಾರೋಹಣ ನಡೆಸಿಲ್ಲ ಎಂದರು. ಅವರಿಗೆ ದೇಶದ ಮೇಲೆ ವಿಶ್ವಾಸವಿಲ್ಲ ಎಂದೆನಿಸುತ್ತದೆ. ಅವರು ಏನಾದರು ಮಾಡಿಕೊಳ್ಳಲಿ, ನಾನು ನನ್ನ ಕರ್ತವ್ಯ ಮಾಡಿದ್ದೇನೆ” ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ಗ್ಯಾರಂಟಿಯಲ್ಲಿ ಬದಲಾವಣೆಯಿಲ್ಲ…
ಪಂಚ ಗ್ಯಾರಂಟಿ ಬಗ್ಗೆ ಮಾತನಾಡಿದ ಅವರು, ” ಗ್ಯಾರಂಟಿಗಳನ್ನು ನಿಲ್ಲಿಸುವ ಬಗ್ಗೆ ಯಾವ ಸಚಿವರು ಮಾತನಾಡುತ್ತಿಲ್ಲ. ಆದರೆ ಅನುಕೂಲ ಇರುವವರಿಗೆ ಇದು ಬೇಡ ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಆನಂತರ ಯೋಚನೆ ಮಾಡುತ್ತೇವೆ. ಆದರೆ ಗ್ಯಾರಂಟಿಗಳು ಮುಂದುವರಿಯಲಿವೆ ಎಂದು ಸ್ಪಷ್ಟ ಪಡಿಸಿದರು.
ಶಿವಕುಮಾರ ಅವರು ಪಕ್ಕದ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಲೋಕಸಭೆಗೆ ಆಯ್ಕೆಯಾದ ನಂತರ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ವೇಳಾಪಟ್ಟಿಯನ್ನು ಚುನಾವಣ ಆಯೋಗ ಇನ್ನಷ್ಟೇ ಪ್ರಕಟಿಸಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ