ವಿಚಾರಣೆ ವೇಳೆ ತಂಪು ಪಾನೀಯ ಸೇವನೆ: ಪೊಲೀಸ್ ಅಧಿಕಾರಿಗೆ 100 ಕೋಕ್ ಕ್ಯಾನ್‌ಗಳ ʼದಂಡʼ ವಿಧಿಸಿದ ಗುಜರಾತ್ ಹೈಕೋರ್ಟ್

ನ್ಯಾಯಾಲಯದ ವಿಚಾರಣೆಯ ವೇಳೆ ಕೋಕಾ ಕೋಲಾ ಕುಡಿಯುತ್ತಿದ್ದ ಪೊಲೀಸ್‌ ಅಧಿಕಾರಿಯೊಬ್ಬರು ಮಂಗಳವಾರ ಗುಜರಾತ್ ಹೈಕೋರ್ಟ್‌ನ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಾಗೂ ಕೋರ್ಟ್‌ ಅವರಿಗೆ 100 ಕೋಕ್ ಕ್ಯಾನ್‌ ದಂಡ ಹಾಕಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ

ತಮ್ಮ ಅಸಮಂಜಸ ವರ್ತನೆಯ ಪರಿಣಾಮ 100 ಕೋಕ್ ಕ್ಯಾನ್‌ಗಳನ್ನು ವಕೀಲರ ಸಂಘದ ಪ್ರತಿಯೊಬ್ಬರಿಗೂ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಪೀಠ ಅಧಿಕಾರಿಗೆ ಸೂಚಿಸಿತು. ಇಲ್ಲದೇ ಹೋದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು ಎಂದು ವರದಿ ತಿಳಿಸಿದೆ.
ಆಗ ಹಿರಿಯ ನ್ಯಾಯವಾದಿ ಭಾಸ್ಕರ್‌ ತನ್ನಾ ಅವರು ಕೋಕ್‌ಗಿಂತಲೂ ನಿಂಬೆ ಶರಬತ್ತು ವಿತರಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿಗಳು ಅಮೂಲ್‌ ಜ್ಯೂಸ್‌ ವಿತರಿಸಲು ಸೂಚಿಸುತ್ತಿದ್ದಂತೆ ನ್ಯಾಯಾಂಗಣ ನಗೆಗಡಲಲ್ಲಿ ತೇಲಿತು. ಇದೇ ವೇಳೆ, ನ್ಯಾಯಾಲಯವು ಈ ಹಿಂದೆ ವಕೀಲರೊಬ್ಬರು ವರ್ಚುವಲ್‌ ವಿಚಾರಣೆ ವೇಳೆ ಸಮೋಸಾ ತಿನ್ನುತ್ತಿದ್ದ ಉದಾಹರಣೆಯನ್ನು ನೀಡಿತು. ಭೌತಿಕ ವಿಚಾರಣೆಗೆ ಹಾಜರಾಗುವುದೇ ಆಗಿದ್ದರೆ ಅಧಿಕಾರಿಯು ಕೋಕ್‌ ಸಹಿತ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದರೆ ಎಂದು ನ್ಯಾಯಾಲಯ ಪ್ರಶ್ನಿಸಿತು.
ಪೊಲೀಸ್‌ ಅಧಿಕಾರಿ ಕ್ಯಾನ್‌ಗಳನ್ನು ಪೂರೈಸಿದ ನಂತರ ಅದನ್ನು ದೃಢಪಡಿಸುವಂತೆ ಸಹಾಯಕ ಸರ್ಕಾರಿ ವಕೀಲ ದೇವನಾನಿ ಅವರಿಗೆ ನ್ಯಾಯಾಲಯ ತಿಳಿಸಿತು.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement