ನಕಲಿ ಔಷಧ ಪ್ರಕರಣ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಮುಖ ಆರೋಪಿಯ ಬಂಧನ

ಬೆಂಗಳೂರು: ನಕಲಿ ಔಷಧ ತಯಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಅಜರ್‌ಬೈಜಾನ್‌ನಿಂದ ಭಾರತಕ್ಕೆ ಮರಳಿದ ಪ್ರಕರಣದ ಪ್ರಮುಖ ಆರೋಪಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ನಕಲಿ ಔಷಧ ಜಾಲ ಬಹಿರಂಗವಾದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ ರಂಜನ್ ಬಾಬು ಎಂಬಾತ ಅಜರ್‌ಬೈಜಾನ್‌ಗೆ ಪರಾರಿಯಾಗಿದ್ದ. ಆತನ ಪತ್ತೆಗೆ ಎಸ್‌‍ಐಟಿ ಅಧಿಕಾರಿಗಳು ಈಗಾಗಲೇ ಲುಕ್‌ಔಟ್‌ ನೋಟಿಸ್‌‍ಜಾರಿ ಮಾಡಿದ್ದರು. ಸೆಪ್ಟೆಂಬರ್ 9ರಂದು ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದ ಎನ್ನಲಾಗಿದೆ.ತನಿಖಾ ತಂಡವು ಆತನನ್ನು ಅಲ್ಲಿ ಪತ್ತೆಹಚ್ಚಿದ್ದು, ಎಸ್‌ಐಟಿ ಒತ್ತಡದ ಹಿನ್ನೆಲೆಯಲ್ಲಿ ಆತ ಭಾರತಕ್ಕೆ ಮರಳಿದ್ದಾನೆ. ಸೋಮವಾರ ಮುಂಜಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಇಂದು, ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಎಸ್‌ಐಟಿ ಸಿದ್ಧತೆ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡುವ ಸಾಧ್ಯತೆಯಿದೆ.

ನಕಲಿ ಔಷಧ ಜಾಲದ ವ್ಯಾಪ್ತಿ, ಔಷಧಗಳ ತಯಾರಿಕೆ ಹಾಗೂ ವಿತರಣೆ ನಡೆದ ಸ್ಥಳಗಳು, ಈ ಅಕ್ರಮ ಜಾಲ ಎಷ್ಟು ಕಾಲದಿಂದ ಕಾರ್ಯನಿರ್ವಹಿಸುತ್ತಿತ್ತು ಎಂಬುದರ ಕುರಿತು ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಶಾಂತ ರಂಜನ್ ಬಾಬು ವಿಚಾರಣೆಯಿಂದ ಈ ಜಾಲದ ಕಾರ್ಯಚಟುವಟಿಕೆ ಹಾಗೂ ಇತರರ ಪಾತ್ರದ ಕುರಿತು ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.
ಬೆಂಗಳೂರು ಕೇಂದ್ರವಾಗಿಸಿಕೊಂಡು ನಡೆದಿದ್ದ ಬಹುಕೋಟಿ ರೂಪಾಯಿಗಳ ನಕಲಿ ಔಷಧ ಹಗರಣದಲ್ಲಿ ₹5 ಕೋಟಿಗೂ ಅಧಿಕ ಮೌಲ್ಯದ ನಕಲಿ, ಅವಧಿ ಮೀರಿದ ಹಾಗೂ ಮರುಲೇಬಲ್ ಅಂಟಿಸಲಾದ ಜೀವ ರಕ್ಷಕ, ಐಸಿಯು ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಸ್ಥಳೀಯ ಔಷಧ ಅಂಗಡಿ ಮಾಲೀಕರೊಬ್ಬನನ್ನು ಎಸ್‌ಐಟಿ ಬಂಧಿಸಿದ್ದು, 90ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಈ ಅಕ್ರಮ ಜಾಲದಿಂದ ಸಂಶಯಾಸ್ಪದ ಔಷಧಗಳನ್ನು ಪೂರೈಸಲಾಗಿದ್ದ ಮಾಹಿತಿ ಬೆಳಕಿಗೆ ಬಂದಿತ್ತು.

ಪ್ರಮುಖ ಸುದ್ದಿ :-   ಶಿರಸಿ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ​ ಬಂಧನ

ಪ್ರಕರಣದ ತನಿಖೆಯನ್ನು ವಿಸ್ತರಿಸಿದ ಎಸ್‌ಐಟಿ, ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿತ್ತು. ಹಗರಣದೊಂದಿಗೆ ಸಂಬಂಧ ಹೊಂದಿದ್ದ ಚಿಲ್ಲರೆ ಮಾರಾಟಗಾರರು, ಸಗಟು ವ್ಯಾಪಾರಿಗಳು ಹಾಗೂ ವಿತರಕರ 16 ಔಷಧ ಪರವಾನಗಿಗಳನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ರದ್ದುಪಡಿಸಿದ್ದು, 8 ಪರವಾನಗಿಗಳನ್ನು ಅಮಾನತುಗೊಳಿಸಿದೆ.
ಅಮಾನತುಗೊಂಡ ಪರವಾನಗಿಗಳ ಪೈಕಿ ಫೈಜರ್ ಕಂಪನಿಯ ಕ್ಯಾರಿಯಿಂಗ್ ಅಂಡ್ ಫಾರ್ವರ್ಡಿಂಗ್ (C&F) ಡಿಪೋ ಪರವಾನಗಿಯೂ ಸೇರಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿ, ವಶಪಡಿಸಿಕೊಳ್ಳಲಾದ ನಕಲಿ ಔಷಧಗಳ ರಾಸಾಯನಿಕ ಅಂಶಗಳ ಪರೀಕ್ಷೆಗೆ ಅಗತ್ಯವಾದ ಮಾನದಂಡಗಳನ್ನು ಒದಗಿಸಲು ಹಾಗೂ ತನಿಖೆಗೆ ಸಹಕರಿಸಲು ಸಂಸ್ಥೆ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ನಕಲಿ ಕ್ಯಾನ್ಸರ್ ಹಾಗೂ ತುರ್ತು ಚಿಕಿತ್ಸಾ ಔಷಧಗಳು ರೋಗಿಗಳಿಗೆ ತಲುಪಿರುವ ಹಿನ್ನೆಲೆಯಲ್ಲಿ, ಪರಿಣಾಮಕ್ಕೊಳಗಾದವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಆರೋಗ್ಯ ಇಲಾಖೆ ಸಕ್ರಿಯವಾಗಿ ಶೋಧ ಕಾರ್ಯ ನಡೆಸುತ್ತಿದೆ.

ಇದರ ನಡುವೆ, ಔಷಧಗಳ ಪ್ಯಾಕಿಂಗ್ ಮತ್ತು ಲೇಬಲ್‌ಗಳನ್ನು ಸಾರ್ವಜನಿಕರು ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ವಿಶೇಷವಾಗಿ ಕ್ಯೂಆರ್‌ ಕೋಡ್‌ಗಳು ಸ್ಕ್ಯಾನ್ ಆಗದಿದ್ದರೆ ತಕ್ಷಣವೇ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದೆ.
ಪ್ರಕರಣದ ಆರಂಭಿಕ ಹಂತದಲ್ಲಿ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಬೆಂಗಳೂರಿನ ಕೃಪಾ ಹೆಲ್ತ್‌ಕೇರ್ ಮಾಲೀಕ ವೀರೇಶಕುಮಾರ ಜೈನ್ ಎಂಬಾತನನ್ನು ಬಂಧಿಸಿತ್ತು. ಅಲ್ಲದೆ, ₹5 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಳ್ಳುವ ಮೂಲಕ ರಾಜ್ಯದ ಅತಿದೊಡ್ಡ ನಕಲಿ ಔಷಧ ಜಾಲವೊಂದನ್ನು ಭೇದಿಸಿತ್ತು.
ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ನಡೆಸಿದ್ದ ದಾಳಿ ವೇಳೆ, ರಾಮನಗರದ ದೊಡ್ಡೇರಿ ಗ್ರಾಮದ ಬಳಿಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ನಕಲಿ ಔಷಧ ದಂಧೆ ಬೆಳಕಿಗೆ ಬಂದಿತ್ತು. ತನಿಖೆ ಮುಂದುವರಿದಂತೆ ನಕಲಿ ಔಷಧಗಳ ಉತ್ಪಾದನೆ, ಪೂರೈಕೆ ಹಾಗೂ ಅವುಗಳನ್ನು ವಿವಿಧ ಆಸ್ಪತ್ರೆ ಮತ್ತು ಮೆಡಿಕಲ್‌ಗಳಿಗೆ ತಲುಪಿಸುವ ಬಹುದೊಡ್ಡ ಜಾಲದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿತ್ತು.

ಪ್ರಮುಖ ಸುದ್ದಿ :-   ಬೆಂಗಳೂರು : ಫೇಸ್‌ಬುಕ್‌ ಜಾಹೀರಾತು ನಂಬಿ ಬರೋಬ್ಬರಿ 1.9 ಕೋಟಿ ರೂ. ಕಳೆದುಕೊಂಡ ಟೆಕ್ಕಿ !

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement