ಗುಜರಾತ್ ವಿವಿ ಹಾಸ್ಟೆಲ್ ಒಳಗೆ ನಮಾಜ್: ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಗುಂಪು, ಐವರಿಗೆ ಗಾಯ

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಶನಿವಾರ ರಾತ್ರಿ ಹಾಸ್ಟೆಲ್‌ ಒಳಗೆ ನುಗ್ಗಿದ ಜನರ ಗುಂಪೊಂದು, ಆಫ್ರಿಕಾ ದೇಶಗಳು, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ದಾಳಿಯಲ್ಲಿ ಐವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿರುವ ರಾಜ್ಯ ಗೃಹ ಸಚಿವ ಹರ್ಷ ಸಂಘ್ವಿ, ಆರೋಪಿಗಳನ್ನು ಸಾಧ್ಯವಾದಷ್ಟು ಬೇಗನೆ ಬಂಧಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ವಿಶ್ವ ವಿದ್ಯಾಲಯದ ಆವರಣದಲ್ಲಿ ಯಾವುದೇ ಮಸೀದಿ ಇಲ್ಲ. ಹೀಗಾಗಿ ರಂಜಾನ್ ಮಾಸದ ರಾತ್ರಿ ವೇಳೆ ನಡೆಸುವ ನಮಾಜ್ ತರವೀಹ್‌ ಸಲ್ಲಿಸಲು ಹಾಸ್ಟೆಲ್ ಒಳಗೆ ತಾವು ಗುಂಪು ಸೇರಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಕೆಲವೇ ಸಮಯದಲ್ಲಿ ದೊಣ್ಣೆಗಳನ್ನು ಹಿಡಿದ ಶಸ್ತ್ರಧಾರಿಗಳ ಗುಂಪು ಹಾಸ್ಟೆಲ್ ಒಳಗೆ ನುಗ್ಗಿ, ತಮ್ಮ ಮೇಲೆ ದಾಳಿ ನಡೆಸಿದೆ. ತಮ್ಮ ಕೊಠಡಿಗಳನ್ನು ಧ್ವಂಸಗೊಳಿಸಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲ್ಲದೆ, ಗುಂಪನ್ನು ತಡೆಯಲು ಹಾಸ್ಟೆಲ್‌ನ ಭದ್ರತಾ ಕಾವಲುಗಾರ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಘೋಷಣೆಗಳನ್ನು ಕೂಗಿದ ಗುಂಪು, ಹಾಸ್ಟೆಲ್ ಒಳಗೆ ನಮಾಜ್ ನಡೆಸಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿತು ಎಂಬುದಾಗಿ ಅಫ್ಘಾನಿಸ್ತಾನದ ವಿದ್ಯಾರ್ಥಿ ತಿಳಿಸಿದ್ದಾನೆ. “ಕೊಠಡಿಗಳ ಒಳಗೂ ಅವರು ನಮ್ಮ ಮೇಲೆ ಹಲ್ಲೆ ನಡೆಸಿದರು. ನಮ್ಮ ಲ್ಯಾಪ್‌ಟಾಪ್‌ಗಳು, ಫೋನ್‌ಗಳನ್ನು ಒಡೆದು ಹಾಕಿದರು. ಬೈಕ್‌ಗಳಿಗೂ ಹಾನಿ ಮಾಡಿದರು” ಎಂದು ಹೇಳಿದ್ದಾನೆ.
ಗಾಯಗೊಂಡ ಐವರು ವಿದ್ಯಾರ್ಥಿಗಳಲ್ಲಿ ಅಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ತುರ್ಕೆಮೆನಿಸ್ತಾನ್‌ನ ತಲಾ ಒಬ್ಬರು ಹಾಗೂ ಆಫ್ರಿಕಾ ದೇಶಗಳ ಇಬ್ಬರು ಸೇರಿದ್ದಾರೆ. ಪೊಲೀಸರು ಆಗಮಿಸುವಷ್ಟರಲ್ಲಿ ಗುಂಪು ಸ್ಥಳದಿಂದ ಪರಾರಿಯಾಗಿತ್ತು. ಗಾಯಗೊಂಡಿರುವ ವಿದ್ಯಾರ್ಥಿಗಳು ಆಸ್ಪತ್ರೆಗಳಿಗೆ ದಾಖಲಾಗಿದ್ದು, ತಮ್ಮ ದೇಶಗಳ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಆತ ತಿಳಿಸಿದ್ದಾನೆ.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement