ಕರ್ನಾಟಕದಲ್ಲಿ ಕರ್ಫ್ಯೂ ಬೇಕೋ-ಬೇಡವೋ..? :ಜನವರಿ 21ರ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಕೊರೊನಾ ತಡೆಗೆ ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಮುಂದುವರಿಸಬೇಕೋ ಬೇಡವೋ ಎನ್ನುವ ಬಗ್ಗೆ ಇದೇ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಪುನರ್ ಪರಿಶೀಲಿಸಿ ತಜ್ಞರ ವರದಿಯಾಧರಿಸಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಇದೇ ಮೊದಲ ಬಾರಿಗೆ ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ೩ನೇ ಅಲೆಯ ಕೊರೊನಾ ಸೋಂಕು ಫ್ಲೂ ತರ ಬಂದು ಹೋಗುತ್ತಿದೆ. ಆಸ್ಪತ್ರೆಗಳಿಗೂ ಹೆಚ್ಚು ದಾಖಲಾತಿ ಆಗುತ್ತಿಲ್ಲ. ಸೋಂಕಿನ ತೀವ್ರತೆ ಕಡಿಮೆ ಇದೆ. ಹೀಗಾಗಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂಬ ಭಾವನೆ ಸಾರ್ವತ್ರಿಕವಾಗಿದೆ. ಈ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ, ಈ ಹಿನ್ನೆಲೆಯಲ್ಲಿ ಕಳದ ಸೋಮವಾರ ನಡೆದ ಸಭೆಯಲ್ಲಿ ನಿಯಮಗಳ ಸಡಿಲಿಕೆ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಮಾಡಿ ಎಂದು ತಜ್ಞರಿಗೆ ಸೂಚಿಸಿದ್ದೇನೆ ಎಂದರು.
ಶುಕ್ರವಾರ ನಡೆಯುವ ಸಭೆಯಲ್ಲಿ ತಜ್ಞರು ಈ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ. ಆಗ ನಮಗೂ ಒಂದು ಸ್ಪಷ್ಟತೆ ಸಿಗುತ್ತದೆ. ಅದರ ಆಧಾರದ ಮೇಲೆ ನಿಯಮಗಳನ್ನು ಸಡಿಲಗೊಳಿಸಬೇಕೇ ಇಲ್ಲವೇ ಹಾಲಿ ಇರುವ ನಿರ್ಬಂಧಗಳನ್ನು ಮುಂದುವರೆಸಬೇಕೇ ಎಂಬ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಆಸ್ಪತ್ರೆ ದಾಖಲಾತಿಗಳು ಕಡಿಮೆ ಇದೆ. ಹೊರ ರೋಗಿಗಳ ತಪಾಸಣೆಗೆ ಹೆಚ್ಚಿನ ಗಮನ ನೀಡಬೇಕಿದೆ. ಕೊರೊನಾ ೩ನೇ ಅಲೆ ಎಲ್ಲೆಡೆ ಕಾಣಿಸಿಕೊಂಡಿದೆ. ಬೇರೆ ರಾಜ್ಯಗಳ ಸೋಂಕಿನ ಸ್ಥಿತಿಗತಿ ಗಮನಿಸಿ ತಜ್ಞರು ರಾಜ್ಯದಲ್ಲಿ ಈ ಅಲೆ ತಡವಾಗಿ ಆರಂಭವಾಗಿರುವುದನ್ನೂ ಗಮನದಲ್ಲಿಟ್ಟುಕೊಂಡು ಜನವರಿ ಅಂತ್ಯ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯದಲ್ಲಿ ೩ನೇ ಅಲೆ ಗರಿಷ್ಠ ಮಟ್ಟ ತಲುಪಬಹುದು ಎಂದು ಅಂದಾಜಿಸಿದ್ದಾರೆ. ೩ನೇ ಅಲೆ ಗರಿಷ್ಠ ಮಟ್ಟ ತಲುಪಿದ ನಂತರ ಇಳಿಕೆ ಆರಂಭವಾಗಬಹುದು. ಅಲ್ಲಿಯವರೆಗೂ ಎಚ್ಚರ ಅಗತ್ಯ ಎಂದು ಅವರು ಹೇಳಿದರು.
ರಾಜ್ಯದ ಕೋವಿಡ್ ಸ್ಥಿತಿಗತಿಯ ಬಗ್ಗೆ ನಿನ್ನೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ ಸಂದರ್ಭದಲ್ಲಿ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮವನ್ನು ಪುನರಾರಂಭಿಸಲು ಸೂಚನೆ ನೀಡಿದ್ದೇನೆ. ಹಳ್ಳಿಗಳಲ್ಲಿ ಔಷಧಿಗಳನ್ನು ತಲುಪಿಸಲು ಕ್ರಮಕೈಗೊಳ್ಳುವಂತೆ ಹೇಳಿದ್ದೇನೆ. ಹೋಂ ಐಸೋಲೇಷನ್‌ನಲ್ಲಿ ಶೇ ೯೪ ರಷ್ಟಿದ್ದು, ಅವರ ಬಗ್ಗೆಯೂ ಗಮನ ಹರಿಸುವಂತೆ ಸೂಚನೆ ನೀಡಿದ್ದೇನೆ ಎಂದರು.

ಪ್ರಮುಖ ಸುದ್ದಿ :-   ಅತ್ಯಾಚಾರ ಪ್ರಕರಣ: ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರುವಂತೆ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement