ರಾಜ್ಯ ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು : ರೇಣುಕಾಚಾರ್ಯ

ದಾವಣಗೆರೆ : ರಾಜ್ಯ ಬಿಜೆಪಿಯಲ್ಲಿ ಕೆಲವರ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಏನಾದರೂ ಮಾತನಾಡಿದರೆ ಪಕ್ಷ ವಿರೋಧಿ ಹೇಳಿಕೆಯಾಗುತ್ತದೆ.
ಆದರೆ ಕೆಲವರು ಮಾತನಾಡಿದರೆ ಪಕ್ಷ ಸಂಘಟನೆಯ ವಿಚಾರವಾಗುತ್ತದೆ. ವಿಧಾನ ಪರಿಷತ್‌ ಸದಸ್ಯ ಸ್ಥಾನ, ರಾಜ್ಯ ಸಭೆ ಸೀಟು ಎಲ್ಲವೂ ಅವರು ಹೇಳಿದವರಿಗೆ ಮಾತ್ರ ನೀಡಲಾಗುತ್ತದೆ. ಅವರ ಒಳ ಹೊಡೆತದ ರಾಜಕಾರಣದ ಬಗ್ಗೆ ನಾವು ಏನೂ ಹೇಳುವಂತಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಹಾಗೂ ಅವರ ಬೆಂಬಲಿಗರನ್ನು ಟೀಕಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ಮಾಡುವ ಚಿಂತನೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಕಾದು ನೋಡೋಣ ಎಂದು ತಿಳಿಸಿದರು.
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ರಾಜ್ಯದಲ್ಲಿ ಯಡಿಯೂರಪ್ಪನವರು ಪಕ್ಷ ಕಟ್ಟಿ ಬೆಳೆಸಿದ್ದಾರೆ. ಯಡಿಯೂರಪ್ಪ ಅವರಂತಹ ಸಮರ್ಥ ನಾಯಕ ಪಕ್ಷಕ್ಕೆ ಬೇಕು ಎಂದು ಹೇಳಿದರು.
ಬೂತ್ ಮಟ್ಟದಿಂದ ಪಕ್ಷದ ಸಂಘಟನೆ ಆಗಬೇಕು. ಕಳೆದ ರಾಜ್ಯ ವಿಧಾನ ಸಭಾಚುನಾವಣೆಯಲ್ಲಿ ಹೊಸ ಮುಖ ಗಳಿಗೆ ಟಿಕೆಟ್‌ ನೀಡಲಾಯಿತು. ಹಿರಿಯ ನಾಯಕರನ್ನು ಕರೆದುಕೊಂಡು ಮತ ಕೇಳಲು ಹೋಗಿರಲಿಲ್ಲ. ಒಳಮೀಸಲಾತಿ ಅವಶ್ಯಕತೆಯೂ ಇರಲಿಲ್ಲ. ಒಳ ಮೀಸಲಾತಿ ಬಗ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಚುನಾವಣೆ ಒಂದು ವಾರದಲ್ಲಿ ಇದ್ದಾಗ ಇದೆನ್ನೆಲ್ಲ ಮಾಡಿ ಗೊಂದಲ ಸೃಷ್ಟಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement