ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ನಿಗದಿಯಾಗಿದ್ದ ಸಮಯವನ್ನು ಈ ವರ್ಷದಿಂದ ಕಡಿತ ಮಾಡಿದೆ. ಹೊಸ ನಿಯಮ2024-25ನೇ ಸಾಲಿನ ಪರೀಕ್ಷೆಯಿಂದಲೇ ಜಾರಿ ಆಗಲಿದೆ ಎಂದು ಹೇಳಲಾಗಿದೆ.
ಸಮಯ ಕಡಿತ ಮಾಡಿರುವ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದ್ದು, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಅವಧಿಯನ್ನು 15 ನಿಮಿಷ ಇಳಿಕೆ ಮಾಡುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ. ಇದರಿಂದಾಗಿ 3 ಗಂಟೆಗಳ ಕಾಲ ಬರೆಯಬೇಕಿದ್ದ ಪರೀಕ್ಷೆ ಅವಧಿ 2 ಗಂಟೆ 45 ನಿಮಿಷಕ್ಕೆ ಇಳಿಕೆಯಾಗಲಿದೆ.
ಈ ಮೊದಲು ವಿದ್ಯಾರ್ಥಿಗಳು ಉತ್ತರ ಬರೆಯಲು 3 ಗಂಟೆ 15 ನಿಮಿಷ ಸಮಯ ಕೊಡಲಾಗುತ್ತಿತ್ತು. 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಲು ಹಾಗೂ 3 ಗಂಟೆ ಉತ್ತರ ಬರೆಯಲು ಸಮಯ ನೀಡಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಹಾಗೂ ಉತ್ತರ ಬರೆಯಲು 2 ಗಂಟೆ 45 ನಿಮಿಷ ಸಮಯದ ಅವಕಾಶ ನೀಡಲಾಗುತ್ತದೆ. ಒಟ್ಟಾರೆಯಾಗಿ ಪರೀಕ್ಷೆಯ ಅವಧಿಯನ್ನು 15 ನಿಮಿಷ ಕಡಿತ ಮಾಡಲಾಗಿದೆ.
ಅಂಕಗಳ ಕಡಿತ
ಈ ಹಿಂದಿನ ಅವಧಿಯಲ್ಲಿ ಪ್ರತಿ ವಿಷಯಗಳಿಗೆ 100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ 2023-24ನೇ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆ ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಪ್ರತ್ಯೇಕ ಅಂಕ ನಿಗದಿ ಮಾಡಲಾಗಿತ್ತು, ಹೀಗಾಗಿ ಲಿಖಿತ ಪರೀಕ್ಷೆಯ ಅಂಕಗಳನ್ನು ಕಡಿತ ಮಾಡಲಾಗಿತ್ತು. ಆದರೆ, ಪರೀಕ್ಷಾ ಅವಧಿ ಕಡಿತಗೊಳಿಸಿರಲಿಲ್ಲ.
ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಸೇರಿದಂತೆ ಪ್ರಾಯೋಗಿಕ ಪರೀಕ್ಷೆಯ ವಿಷಯಗಳಲ್ಲಿ ಲಿಖಿತ ಪರೀಕ್ಷೆಯನ್ನು 70 ಅಂಕ ಹಾಗೂ ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಲ್ಲಿ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವಾಗ ಪಠ್ಯಕ್ರಮದಲ್ಲೇ ಇರುವ ವಿಯಷಗಳ ಮೇಲಷ್ಟೇ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಕಡ್ಡಾಯ ಎಂದು ಹೇಳಿದೆ.
ವಿದ್ಯಾರ್ಥಿಗಳು 80 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆ ಪತ್ರಿಕೆಗಳು ಒಟ್ಟು 120 ಅಂಕಗಳ ಪ್ರಶ್ನೆಗಳನ್ನು ಹೊಂದಿರಲಿದ್ದು, ಅವಧಿಗಳಲ್ಲಿ 80 ಅಂಕಗಳಿಗಷ್ಟೇ ಉತ್ತರಿಸಬೇಕು. 70 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆ ಪತ್ರಿಕೆಗಳು 105 ಅಂಕಗಳ ಪ್ರಶ್ನೆಗಳನ್ನು ಹೊಂದಿರಲಿದ್ದು, ಅವಧಿಗಳಲ್ಲಿ 70 ಅಂಕಗಳಿಗಷ್ಟೇ ಉತ್ತರಿಸಬೇಕು ಎಂದು ಮಂಡಳಿ ಸುತ್ತೋಲೆಯಲ್ಲಿ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ