ಬೆಂಗಳೂರು: ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 10ರಂದು ಎನ್‍ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಕರ್ನಾಟಕಕ್ಕೆ ಬರಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಮತಗಳನ್ನು ಗಮನಿಸಿದರೆ ನಮ್ಮ ಗೆಲುವು ಖಚಿತ ಎಂದರು. ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಇಂಗಿತವನ್ನು ಜೆಡಿಎಸ್ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಎಂದರು.
ಕೆಲವರಿಗೆ ಸಾಮಾಜಿಕ ನ್ಯಾಯ ಎಂಬುದು ಕೇವಲ ಘೋಷಣೆ. ಆದರೆ, ಬಿಜೆಪಿಗೆ ಅದೊಂದು ಬದ್ಧತೆ. ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಆಯ್ಕೆ ಮಾಡಿದ್ದೆವು. ಕೆಲವು ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇಡೀ ದೇಶದ ಜನ ಇದನ್ನು ಮೆಚಿಕೊಂಡಿದ್ದರು. ಕಲಾಂ ಅವರು ಆ ಸ್ಥಾನದ ಗೌರವ ಹೆಚ್ಚಿಸಿದ್ದರು ಎಂದರು.
ಮತ್ತೆ ಅವಕಾಶ ಲಭಿಸಿದಾಗ ದಲಿತ ವರ್ಗದ ರಾಮನಾಥ ಕೋವಿಂದ್ ಅವರನ್ನು ಮೋದಿಯವರ ನೇತೃತ್ವದ ಎನ್‍ಡಿಎ ಆಯ್ಕೆ ಮಾಡಿತ್ತು. ರಾಷ್ಟ್ರಪತಿ ಭವನ ವಿವಾದ, ಕಳಂಕವಿಲ್ಲದೆ 5 ವರ್ಷ ಪೂರ್ಣಗೊಂಡಿದೆ. ಈಗ ಆದಿವಾಸಿ ಸುಶಿಕ್ಷಿತ ಮಹಿಳೆ, ಬಡತನದ ನೋವನ್ನು ಅನುಭವಿಸಿ, ಶಾಸಕಿ, ಸಚಿವೆ ಮತ್ತು ರಾಜ್ಯಪಾಲರಾಗಿ ಅನುಭವವಿದ್ದವರು ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಸಾಮಾಜಿಕ ನ್ಯಾಯ ನಮ್ಮ ಬದ್ಧತೆಯಾಗಿದ್ದು, ಅದನ್ನು ತೋರಿಸಿದ್ದೇವೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ