ಮೊಹಾಲಿ: ಪಂಜಾಬ್ನ ಮೊಹಾಲಿಯಲ್ಲಿ ಸೋಮವಾರ ನಡೆಯುತ್ತಿದ್ದ ಕಬಡ್ಡಿ ಪಂದ್ಯಾವಳಿಯೊಂದರಲ್ಲಿ ಭಾಗವಹಿಸಿದ್ದ ಕಬಡ್ಡಿ ಆಟಗಾರನೊಬ್ಬನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ದಾಳಿಕೋರರು ಮೋಟಾರ್ಸೈಕಲ್ನಲ್ಲಿ ಬಂದು, ಮೊದಲು ಕಬಡ್ಡಿ ಆಟಗಾರ ರಾಣಾ ಬಾಲಚೌರಿಯಾ ಅವರ ಬಳಿ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಸಮೀಪಿಸಿದ್ದಾರೆ. ನಂತರ ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ರಾಣಾ ಅವರನ್ನು ತಕ್ಷಣವೇ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ರಾಣಾ ಅವರ ಮುಖ ಮತ್ತು ದೇಹದ ಮೇಲ್ಭಾಗಕ್ಕೆ ನಾಲ್ಕರಿಂದ ಐದು ಗುಂಡುಗಳು ತಗುಲಿವೆ ಎನ್ನಲಾಗಿದೆ.
ಮೊಹಾಲಿ ಎಸ್ಎಸ್ಪಿ ಹರಮನ್ದೀಪ್ ಹನ್ಸ್ ಮಾತನಾಡಿ, “ದಾಳಿಕೋರರು ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಆಟಗಾರರನ್ನು ಸಮೀಪಿಸಿದ್ದಾರೆ ಮತ್ತು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ನಾವು ಘಟನೆಯ ವಿವರಗಳನ್ನು ಮತ್ತು ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ. ಈ ಹಂತದಲ್ಲಿ ಘಟನೆಯ ಹಿಂದಿನ ನಿಜವಾದ ಕೋನದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಬಹು ಆಯಾಮಗಳಲ್ಲಿ ತನಿಖೆ :
ಪೊಲೀಸರು ಈ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಗ್ಯಾಂಗ್ಸ್ಟರ್ ಸಂಪರ್ಕದ ಸಾಧ್ಯತೆಗಳ ಕುರಿತು ಪರಿಶೀಲಿಸುತ್ತಿದ್ದಾರೆ. ಗ್ಯಾಂಗ್ ಒಂದು, ಕೆಲವು ತಂಡಗಳಿಗೆ ಆಡದಂತೆ ಕಬಡ್ಡಿ ಆಟಗಾರರಿಗೆ ಮತ್ತು ಅವರ ಪೋಷಕರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದು, ಇಲ್ಲದಿದ್ದರೆ ಇದೇ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.
ವಿಪಕ್ಷಗಳಿಂದ ಆಪ್ ಸರ್ಕಾರದ ವಿರುದ್ಧ ವಾಗ್ದಾಳಿ:
ಈ ಘಟನೆಯು ಪಂಜಾಬ್ನಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ)ದ ವಿರುದ್ಧ ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ