ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ( Bangal Kolli ) ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನಗಳ ವರೆಗೆ ಮಳೆ ಜೋರಾಗಿ ಸುರಿಯಲಿದೆ ಎಂದು ಹೇಳಲಾಗಿದೆ.
ರಾಜ್ಯದ ಕರಾವಳಿ, ಮಳೆನಾಡು ಪ್ರದೇಶಗಳು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ರಾಜ್ಯದ ಕರಾವಳಿಯಲ್ಲಿ ಕಳೆದ ಐದಾರು ದಿನಗಳಿಂದ ನಿರಂತರವಾಗಿ ಮಳೆಯಾಗಿದ್ದು ಸತತ ನಾಲ್ಕು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಕಳೆದ 24 ಗಂಟೆಗಳಲ್ಲಿ16 ಸೆಂಮೀನಷ್ಟು ಮಳೆಯಾಗಿದೆ. ಕರಾವಳಿಯ ಹಲವೆಡೆ ಉತ್ತಮ ಮಳೆಯಾಗಿದ್ದು ಕೆಲವೆಡೆ 10 ಸೆಂಮೀಗಿಂತ ಹೆಚ್ಚು ಮಳೆಬಿದ್ದಿರುವುದು ದಾಖಲಾಗಿದೆ.
ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು 15.98 ಸೆಂ.ಮೀ. ಮಳೆಯಾಗಿದೆ. ನಂತರ ಉತ್ತರಕನ್ನಡ ಜಿಲ್ಲೆ ಕ್ಯಾಸಲ್ರಾಕ್ ಪ್ರದೇಶದಲ್ಲಿ 15.24 ಸೆಂ.ಮೀ. ಮಳೆಯಾಗಿದೆ ಉಡುಪಿ ಜಿಲ್ಲೆ ಕೋಟ ಪ್ರದೇಶದಲ್ಲಿ 11.88 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಉಡುಪಿ ಜಿಲ್ಲೆ ಕುಂದಾಪುರದಲ್ಲಿ 9.25 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 8.04 ಸೆಂ.ಮೀ., ಮಂಗಳೂರು-8.75ಸೆಂ.ಮೀ., ಸುಳ್ಯ-7.56 ಸೆಂ.ಮೀ., ಕುಮಟಾ ತಾಲೂಕಿನ ಗೋಕರ್ಣದಲ್ಲಿ 8.03 ಸೆಂ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್, ಉತ್ತರ ಒಳನಾಡಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ