ನಮ್ಮ ಮಗಳನ್ನು ಲವ್ ಜಿಹಾದಿನಿಂದ ರಕ್ಷಣೆ ಮಾಡಿ: ಯುವತಿ ಕುಟುಂಬಸ್ಥರಿಂದ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ

ಹುಬ್ಬಳ್ಳಿ: ಕಳೆದ ತಿಂಗಳ ಹಿಂದೆ ಗದಗ ಮೂಲದ ಗೃಹಿಣಿಯ ಲವ್ ಜಿಹಾದ್ ಪ್ರಕರಣ ಆರೋಪ ಕೇಳಿಬಂದ ಬನ್ನಲ್ಲೇಈಗ ಮತ್ತೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಹೇಗಾದರೂ ಮಾಡಿ ನಮ್ಮ ಮಗಳನ್ನು ಲವ್ ಜಿಹಾದ್ ನಿಂದ ರಕ್ಷಣೆ ಮಾಡಿ ಮನೆಗೆ ಕರೆತನ್ನಿ ಎಂದು ಯುವತಿ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಉಪನಗರ ಪೊಲೀಸ್ ಠಾಣೆ  ಎದುರು ಬುಧವಾರ ಬೆಳಿಗ್ಗೆಯಿಂದ  ಧರಣಿ ನಡೆಸಿದ್ದಾರೆ.
ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿಸಿ ಮದುವೆಯಾಗಿದ್ದಾನೆ. ಆತ ಮೋಸದಿಂದ ಮದುವೆಯಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಆರೋಪಿಯನ್ನು ಕೂಡಲೇ ಬಂಧನ ಮಾಡಿ ಎಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳು ಮತ್ತು ಯುವತಿಯ ಪಾಲಕರು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿ ಇಬ್ರಾಹಿಂ ಎಂಬಾತ ಮತ್ತು ಕಮರಿಪೇಟೆ ಸ್ನೇಹ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ರಾಹಿಂ ಪ್ಲಂಬರಿಂಗ್ ಕೆಲಸ ಮಾಡುತ್ತಿದ್ದರೆ ಸ್ನೇಹ ಟೈಲರಿಂಗ್ ಕೆಲಸ ಮಾಡುತ್ತಿದ್ದಳು.
ಸ್ನೇಹಳ ಅಣ್ಣ ಪವನ್ ಮೂಲಕ ಇಬ್ರಾಹಿಂ ಪರಿಚಯ ಮಾಡಿಕೊಂಡಿದ್ದ. ಕಳೆದ ಆರು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಈ ವರ್ಷ ಫೆಬ್ರವರಿ 11 ರಂದು ಗದಗ ಉಪ ನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದೆ. ಈ ಮದುವೆಗೆ ಯುವತಿಯ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಪ್ರೀತಿ ಹೆಸರಲ್ಲಿ ಲವ್ ಜಿಹಾದ್ ಮಾಡಿ ತಮ್ಮ ಮಗಳನ್ನು ಇಬ್ರಾಹಿಂ ಮೋಸದಿಂದ ಮದುವೆಯಾಗಿದ್ದಾನೆ.ಮತಾಂತರಕ್ಕೆ ಯತ್ನಸಿದ್ದಾರೆ, ಅಲ್ಲದೆ ಮದುವೆಯಾದಾಗ ತಮ್ಮ ಮಗಳು ಅಪ್ರಾಪ್ತೆಯಾಗಿದ್ದಳು. ದಾಖಲೆಗಳಲ್ಲಿ ಇರುವ ಮದುವೆಯ ದಿನ ಅಂದ್ರೆ ಫೇ 11 ರಂದು ಸ್ನೇಹ ಮನೆಯಲ್ಲೇ ಇದ್ದಳು. ಮದುವೆ ಪತ್ರದಲ್ಲಿ ಸಹಿ ಅವಳದ್ದಲ್ಲ. ಸುಳ್ಳು ದಾಖಲೆ ಮೂಲಕ ಇಬ್ರಾಹಿಂ ಸ್ನೇಹಳನ್ನು ಮದುವೆಯಾಗಿದ್ದಾನೆ. ಈ ಮದುವೆಗೆ ಗದಗ ಸಬ್ ರಿಜಿಸ್ಟರ್ ಕುಮ್ಮಕ್ಕಿದೆ ಎಂದು ಸ್ನೇಹ ತಾಯಿ ಯಲ್ಲಮ್ಮ ಆರೋಪಿಸಿದ್ದಾರೆ.
ಎಪ್ರಿಲ್ 2 ರಂದು ಬೇಂಡಿಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ಸ್ನೇಹ ಕುಟುಂಬಸ್ಥರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ತನಿಖೆ ನಡೆಸದೇ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ, ಸ್ನೇಹ ಕುಟುಂಬಸ್ಥರು ಜೊತೆಗೆ ಕೆಲವು ಹಿಂದೂಪರ ಸಂಘಟನೆಗಳು ಉಪನಗರ ಠಾಣೆ ಮುಂದೆ ಬುಧವಾರ ಬೆಳಗ್ಗೆಯಿಂದ ಸಂಜೆಯ ತನಕ ಧರಣ ನಡೆಸಿದ್ದಾರೆ. ಪ್ರೀತಿಯ ಹೆಸರಲ್ಲಿ ಯುವತಿಯ ತಲೆ ಕೆಡಿಸಿ ಮದುವೆಯಾಗಿ, ಮತಾಂತರಕ್ಕೆ‌ ಹುನ್ನಾರ ಮಾಡಲಾಗಿದೆ ಎಂದು ಯುವತಿಯ ಕಡೆಯವರು ಮತ್ತು ಸಮಾಜದ ಮುಖಂಡರು ಆರೋಪಿಸಿದ್ದು, ಠಾಣೆ ಮುಂದೆ ಜಮಾಯಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಧರಣಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಎಚ್ಚೆತ್ತ ಪೊಲೀಸರು ಯುವತಿ ತಾಯಿಯಿಂದ ಮತ್ತೊಂದು ದೂರು ಪಡೆದುಕೊಂಡಿದ್ದಾರೆ.
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬುಧವಾರ ಧರಣಿ ಸ್ಥಳಕ್ಕೆ ಆಗಮಿಸಿ ಪಾಲಕರ ಜೊತೆಗೆ ಮಾಹಿತಿ ಪಡೆದರು. ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ, ಬಿಜೆಪಿ ಅಧಿಕಾರದಲ್ಲಿದ್ದರೂ ಇದರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿಲ್ಲ. ಗುರುವಾರ ಮಧ್ಯಾಹ್ನ 12 ಗಂಟೆಯ ತನಕ ಸಮಯ ನೀಡುತ್ತೇವೆ. ಒಂದು ವೇಳೆ ಯುವಕನನ್ನು ಬಂಧಿಸಿ ಯುವತಿಯನ್ನು ಕರೆತರದಿದ್ದರೆ, ಹೋರಾಟ ಹಾದಿ ಬೇರೆ ರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement