ಬೆಂಗಳೂರು: ಕಾರಿನ ಕನ್ನಡಿಗೆ ಬೈಕ್ ಸ್ವಲ್ಪ ತಾಗಿದ್ದಕ್ಕೆ ಕಾರಿನವರು ಬೆನ್ನಟ್ಟಿ ಬೈಕ್ ಗೆ ಗುದ್ದಿ ಸವಾರನನ್ನು ಸಾಯಿಸಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮ ಲೇಔಟ್ನಲ್ಲಿ ಅಕ್ಟೋಬರ್ 25ರಂದು ರಾತ್ರಿ ಈ ಘಟನೆ ನಡೆದಿದೆ.
ದರ್ಶನ ಮತ್ತು ವರುಣ ಎಂಬುವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರಿನ ಕನ್ನಡಿಗೆ ಅವರ ಬೈಕ್ ಟಚ್ ಆಗಿದೆ. ಇದರಿಂದ ಕೋಪಗೊಂಡ ಕಾರಿನಲ್ಲಿದ್ದ ಮನೋಜಕುಮಾರ ಮತ್ತು ಆರತಿ ಶರ್ಮಾ ದಂಪತಿ ಎರಡು ಕಿಲೋಮೀಟರ್ ದೂರದ ವರೆಗೆ ಹಿಂಬಾಲಿಸಿ ಬೈಕ್ಗೆ ಹಿಂದಿನಿಂದ ಕಾರಿನಿಂದ ಗುದ್ದಿಸಿದ್ದಾರೆ.
ಕಾರು ಗುದ್ದಿದ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ರಸ್ತೆಯಲ್ಲಿ ಹಾರಿ ಬಿದ್ದಿದ್ದರು. ಪರಿಣಾಮ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೂ ದರ್ಶನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು ವರುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಬೈಕಿಗೆ ಗುದ್ದಿ ಪರಾರಿಯಾಗಿದ್ದರು. ಮೊದಲು ಜೆಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಎಂದು ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ವೇಳೆ ಇದು ಉದ್ದೇಶಪೂರ್ವಕವಾಗಿ ಮಾಡಿದ್ದು ಎಂದು ಗೊತ್ತಾಯಿತು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ