ಒಎಸ್‌ಎಂ ಮೌಲ್ಯಮಾಪನ ವಿವಾದದ ಬೆನ್ನಲ್ಲೇ ಬಿಗ್ ಸರ್ಜರಿ: ಸಿಬಿಎಸ್‌ಇ ನೂತನ ಮುಖ್ಯಸ್ಥರಾಗಿ ಲೋಖಂಡೆ ಪ್ರಶಾಂತ ಸೀತಾರಾಮ ನೇಮಕ

ನವದೆಹಲಿ : ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (CBSE) ನೂತನ ಮುಖ್ಯಸ್ಥರಾಗಿ ಹಿರಿಯ ಐಎಎಸ್ ಅಧಿಕಾರಿ ಲೋಖಂಡೆ ಪ್ರಶಾಂತ ಸೀತಾರಾಮ ಹಾಗೂ ನೂತನ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿ ವರುಣ ಭಾರದ್ವಾಜ ಅವರನ್ನು ಸರ್ಕಾರ ಮಂಗಳವಾರ ನೇಮಕ ಮಾಡಿದೆ.
ಸಿಬಿಎಸ್‌ಇ ಇತ್ತೀಚೆಗೆ ಜಾರಿಗೆ ತಂದಿದ್ದ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯ ಸುತ್ತ ಭಾರಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಈ ಮಹತ್ವದ ಬದಲಾವಣೆ ಮಾಡಲಾಗಿದೆ.
12ನೇ ತರಗತಿಯ ಪರೀಕ್ಷಾ ಪ್ರಕ್ರಿಯೆಯ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಿಬಿಎಸ್‌ಇ ಅಧ್ಯಕ್ಷ ರಾಹುಲ್ ಸಿಂಗ್ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನು ಮಂಡಳಿಯಿಂದ ಕಿತ್ತೊಗೆದ ಕೆಲವೇ ಗಂಟೆಗಳಲ್ಲಿ ಈ ಹೊಸ ನೇಮಕಾತಿ ಆದೇಶ ಹೊರಬಿದ್ದಿದೆ.
ಅಧಿಕಾರಿಗಳ ಹಿನ್ನೆಲೆ:
ಲೋಖಂಡೆ ಪ್ರಶಾಂತ ಸೀತಾರಾಮ: ಇವರು 2001ರ ಬ್ಯಾಚ್‌ನ ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ (AGMUT) ಕೆಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವರುಣ ಭಾರದ್ವಾಜ: ಇವರು 2008ರ ಬ್ಯಾಚ್‌ನ ಇಂಡಿಯನ್ ಇನ್ಫಾರ್ಮೇಶನ್ ಸರ್ವಿಸ್ (IIS) ಅಧಿಕಾರಿಯಾಗಿದ್ದು, ಪ್ರಸ್ತುತ ಶಿಕ್ಷಣ ಸಚಿವಾಲಯದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಎಸ್‌ಎಂ (OSM) ಖರೀದಿ ತನಿಖೆಗೆ ಕೇಂದ್ರದಿಂದ ಸಮಿತಿ ರಚನೆ
ಇದಕ್ಕೂ ಮುನ್ನ, ಸಿಬಿಎಸ್‌ಇಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯ ಸರ್ವಿಸ್‌ಗಳ ಖರೀದಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತನಿಖೆ ಮಾಡಲು ಸರ್ಕಾರ ಏಕಸದಸ್ಯ ಸಮಿತಿಯನ್ನು ರಚಿಸಿದೆ. ಮಂಗಳವಾರ ಹೊರಡಿಸಲಾದ ಕ್ಯಾಬಿನೆಟ್ ಸಚಿವಾಲಯದ ಜ್ಞಾಪನಾ ಪತ್ರದ ಪ್ರಕಾರ, ಸಾಮರ್ಥ್ಯ ವೃದ್ಧಿ ಆಯೋಗದ (Capacity Building Commission) ಅಧ್ಯಕ್ಷರಾದ ಎಸ್. ರಾಧಾ ಚೌಹಾಣ ಈ ತನಿಖಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ.
ಚೌಹಾಣ ಅವರಿಗೆ ಅಗತ್ಯವಿದ್ದಾಗ ಇತರ ಇಲಾಖೆಗಳ ಅಧಿಕಾರಿಗಳ ನೆರವು ಪಡೆಯಲು ಅಧಿಕಾರ ನೀಡಲಾಗಿದ್ದು, ಸಾಮರ್ಥ್ಯ ವೃದ್ಧಿ ಆಯೋಗವು ಈ ತನಿಖಾ ಮಂಡಳಿಗೆ ಅಗತ್ಯ ಸೆಕ್ರೆಟರಿಯೆಟ್ ಬೆಂಬಲವನ್ನು ನೀಡಲಿದೆ. ಈ ಸಮಿತಿಯು ಮುಂದಿನ ಒಂದು ತಿಂಗಳೊಳಗಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (DoPT) ತನ್ನ ವರದಿಯನ್ನು ಸಲ್ಲಿಸಬೇಕಾಗಿದೆ.
ಏನಿದು OSM  ವಿವಾದ?
ಮಂಡಳಿಯು ಅಪ್‌ಲೋಡ್ ಮಾಡಿದ ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳು ತಮ್ಮ ಕೈಬರಹಕ್ಕೆ ಹೋಲುತ್ತಿಲ್ಲ ಎಂದು ಕೆಲವು 12ನೇ ತರಗತಿಯ ವಿದ್ಯಾರ್ಥಿಗಳು ಆರೋಪಿಸಿದ ನಂತರ ಸಿಬಿಎಸ್‌ಇ ತೀವ್ರ ವಿವಾದಕ್ಕೆ ಸಿಲುಕಿದೆ. ಇದು ಒಎಸ್‌ಎಮ್ ವ್ಯವಸ್ಥೆಯಲ್ಲಿ ಉತ್ತರ ಪತ್ರಿಕೆಗಳು ಅದಲುಬದಲಾಗಿರುವ ಸಾಧ್ಯತೆಯ ಬಗ್ಗೆ ದೊಡ್ಡ ಮಟ್ಟದ ಆತಂಕವನ್ನು ಮೂಡಿಸಿದೆ.
ಸಿಬಿಎಸ್‌ಇ ಮಂಡಳಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಈ ಒಎಸ್‌ಎಂ ವ್ಯವಸ್ಥೆಯನ್ನು ಜಾರಿಗೆ ತಂದಿರುವುದರ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತಾಂತ್ರಿಕ ದೋಷಗಳು, ಪಾವತಿ ವೈಫಲ್ಯಗಳು ಹಾಗೂ ಮರುಪರಿಶೀಲನೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮಂಡಳಿಯು ಭಾರೀ ಟೀಕೆಯನ್ನು ಎದುರಿಸುತ್ತಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಒತ್ತಾಯ ಕೇಳಿಬಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement