ನವದೆಹಲಿ: ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆಗೆ ಒತ್ತಾಯಿಸಿ ಹಾಗೂ ಇತ್ತೀಚಿನ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದ ಮೂರು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹವಾಮಾನ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ (Sonam Wangchuk) ಅವರು ತಮ್ಮ ಉಪವಾಸವನ್ನು ಸೋಮವಾರ ಅಂತ್ಯಗೊಳಿಸುವ ಸಾಧ್ಯತೆ ಇದೆ ಎಂದು ಅವರ ಪತ್ನಿ ಗೀತಾಂಜಲಿ ಅಂಗ್ಮೋ ತಿಳಿಸಿದ್ದಾರೆ.
ಆದರೆ, ಇದಕ್ಕಾಗಿ ಎರಡು ಷರತ್ತುಗಳನ್ನು ಈಡೇರಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ನಾಯಕರು ಅವರನ್ನು ಭೇಟಿ ಮಾಡಿ, ಶಿಕ್ಷಣ ಕ್ಷೇತ್ರದಲ್ಲಿನ ಹೊಣೆಗಾರಿಕೆ ಮತ್ತು ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸುವುದಾಗಿ ಭರವಸೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಾಂಗ್ಚುಕ್ ಅವರನ್ನು ಸ್ಥಳದಿಂದ ತೆರವುಗೊಳಿಸಿದಪೊಲೀಸರು ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು.
ವಾಂಗ್ಚುಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಭಾನುವಾರ ತಿರಸ್ಕರಿಸಿದೆ. ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರ ಪೀಠವು, ಆರೋಗ್ಯ ಸ್ಥಿತಿ ಹದಗೆಟ್ಟಿದ್ದರೂ ವಾಂಗ್ಚುಕ್ ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ದಾಖಲಾಗದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿರುವುದು ಕಾನೂನುಬದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿತು.
“ವೈದ್ಯರು ಅವರ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅವರ ಒಪ್ಪಿಗೆಯೊಂದಿಗೆ ಔಷಧಿ ನೀಡಲಾಗಿದೆ. ಹೀಗಾಗಿ ಬಲವಂತದ ಕ್ರಮ ಅಥವಾ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ತಿಳಿಸಿತು.
ವಾಂಗ್ಚುಕ್ ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಅವರ ಪತ್ನಿ ಗೀತಾಂಜಲಿ ಅಂಗ್ಮೋ ಮನವಿ ಮಾಡಿದ್ದರು. ಅವರನ್ನು ಕುಟುಂಬದ ಅನುಮತಿಯಿಲ್ಲದೆ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಇಚ್ಛೆಗೆ ವಿರುದ್ಧವಾಗಿ ಇರಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರವು, ದೀರ್ಘಾವಧಿಯ ಉಪವಾಸದಿಂದ ವಾಂಗ್ಚುಕ್ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ದೇಹದ ಪ್ರಮುಖ ಆರೋಗ್ಯ ಸೂಚಕಗಳಲ್ಲಿ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತು.
ಜುಲೈ 16ರಂದು ನೀಡಿದ್ದ ಆದೇಶದಲ್ಲಿ ಅಧಿಕಾರಿಗಳಿಗೆ ವಾಂಗ್ಚುಕ್ ಅವರ ಆರೋಗ್ಯವನ್ನು ಗಮನಿಸಿ, ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡುವಂತೆ ಸೂಚಿಸಲಾಗಿತ್ತು. ಅದೇ ಆದೇಶದ ಅನುಸಾರ ಸರ್ಕಾರ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಈ ನಡುವೆ ಆಸ್ಪತ್ರೆಯಿಂದ ಸಂದೇಶ ನೀಡಿರುವ ವಾಂಗ್ಚುಕ್, ಜುಲೈ 20ರಂದು ನಡೆಯಲಿರುವ ಮೆರವಣಿಗೆಯಲ್ಲಿ ಬೆಂಬಲಿಗರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ವಾಂಗ್ಚುಕ್ ಆರೋಗ್ಯ ಸ್ಥಿತಿ
ಆಸ್ಪತ್ರೆಯ ಮಾಹಿತಿ ಪ್ರಕಾರ, ವಾಂಗ್ಚುಕ್ ಅವರ ಪ್ರಮುಖ ಆರೋಗ್ಯ ಸೂಚಕಗಳು ಪ್ರಸ್ತುತ ಸ್ಥಿರವಾಗಿವೆ. ರಕ್ತ ಪರೀಕ್ಷೆಯ ವರದಿಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ, ನಿರಂತರ ನಿಗಾ ಅಗತ್ಯವಿದೆ. ದೀರ್ಘಾವಧಿಯ ಉಪವಾಸದಿಂದ ಉಂಟಾಗಿರುವ ದೈಹಿಕ ಒತ್ತಡ ಮತ್ತು ದೇಹದ ವಿವಿಧ ವ್ಯವಸ್ಥೆಗಳ ಮೇಲೆ ಉಂಟಾದ ಪರಿಣಾಮಗಳ ಹಿನ್ನೆಲೆಯಲ್ಲಿ, ತಜ್ಞ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ನಿರಂತರ ಚಿಕಿತ್ಸೆ ಅಗತ್ಯವಿದೆ ಎಂದು ಆಸ್ಪತ್ರೆ ತಿಳಿಸಿದೆ. ವಾಂಗ್ಚುಕ್ ಅವರಿಗೆ 24 ಗಂಟೆಗಳ ವೈದ್ಯಕೀಯ ಮೇಲ್ವಿಚಾರಣೆ ಮತ್ತು ಅಗತ್ಯ ವೈದ್ಯಕೀಯ ನೆರವು ಮುಂದುವರಿಸಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ