ದೇಶಾದ್ಯಂತ ಬಹುಚರ್ಚಿತ ನಿಠಾರಿ ಹತ್ಯಾಕಾಂಡ ಪ್ರಕರಣದಲ್ಲಿ ಖುಲಾಸೆಯಾಗಿದ್ದ ಸುರಿಂದರ ಕೋಲಿ ಆತ್ಮಹತ್ಯೆ

ಹರಿದ್ವಾರ: 2006ರ ಬಹುಚರ್ಚಿತ ನಿಠಾರಿ ಹತ್ಯಾಕಾಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಖುಲಾಸೆಗೊಂಡಿದ್ದ ಸುರಿಂದರ ಕೋಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹರಿದ್ವಾರದಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಕಳೆದ ವರ್ಷ ಸುಪ್ರೀಂ ಕೋರ್ಟ್‌ನಿಂದ ಖುಲಾಸೆಗೊಂಡ ಬಳಿಕ ಕೆಲಕಾಲದಿಂದ ಹರಿದ್ವಾರದಲ್ಲಿ ಈತ ಚಹಾ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಸಪ್ತಸರೋವರ ರಸ್ತೆಯ ಲಾಲಮಾತಾ ದೇವಾಲಯದ ಎದುರಿನಲ್ಲಿರುವ ಚಹಾ ಅಂಗಡಿಯಲ್ಲಿ ಕಬ್ಬಿಣದ ಕಂಬಕ್ಕೆ ಹಗ್ಗ ಕಟ್ಟಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಸುರಿಂದರ ಕೋಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ದೊರಕಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮೃತನನ್ನು ಸುರಿಂದರ ಕೋಲಿ ಎಂದು ಗುರುತಿಸಿದ್ದಾರೆ. ಅಲ್ಮೋರಾದಲ್ಲಿರುವ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಕೋಲಿ ಕಳೆದ ಕೆಲವು ತಿಂಗಳುಗಳಿಂದ ಹರಿದ್ವಾರದಲ್ಲಿ ವಾಸವಾಗಿದ್ದು, ಬಾಡಿಗೆಗೆ ಚಹಾ ಅಂಗಡಿ ನಡೆಸುತ್ತಿದ್ದ ಎಂಬುದಾಗಿ ತಿಳಿದುಬಂದಿದೆ. ಅಂಗಡಿಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಹೀಗಾಗಿ ಆತ್ಮಹತ್ಯೆಯ ಕಾರಣಗಳ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ನಿಠಾರಿ ಹತ್ಯಾಕಾಂಡ
2006ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ನೊಯ್ಡಾದ ಸೆಕ್ಟರ್-31ರ ಡಿ-5 ಬಂಗಲೆಯ ಪಕ್ಕದ ಚರಂಡಿಯ ಹಿಂದೆ 16 ಮಾನವ ತಲೆಬುರುಡೆಗಳು, ಮೂಳೆಗಳು ಹಾಗೂ ಬಟ್ಟೆಗಳು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಹತ್ತಿರದ ನಿಠಾರಿ ಗ್ರಾಮದಲ್ಲಿ ಬಡ ಕಾರ್ಮಿಕ ಕುಟುಂಬಗಳ ಹಲವಾರು ಮಕ್ಕಳು ಕಾಣೆಯಾಗುತ್ತಿರುವ ಬಗ್ಗೆ ಸ್ಥಳೀಯರು ಬಹುಕಾಲದಿಂದ ದೂರು ನೀಡುತ್ತಿದ್ದರೂ, ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಪಾಯಲ್ ಎಂಬ ಯುವತಿ ಕಾಣೆಯಾದ ಪ್ರಕರಣದ ತನಿಖೆ ವೇಳೆ ಆಕೆಯ ಮೊಬೈಲ್ ಫೋನ್‌ನ ಸುಳಿವು ಸ್ಥಳೀಯ ರಿಕ್ಷಾ ಚಾಲಕನ ಬಳಿ ಸಿಕ್ಕಿತ್ತು. ಆತ ಆ ಮೊಬೈಲ್ ಅನ್ನು ಡಿ-5 ಬಂಗಲೆಯಲ್ಲಿದ್ದ ವ್ಯಕ್ತಿಯಿಂದ ಪಡೆದಿದ್ದಾಗಿ ಹೇಳಿದ್ದ.
ಆ ಬಂಗಲೆಯ ಮಾಲೀಕ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ ಆಗಿದ್ದು, ಸುರಿಂದರ ಕೋಲಿ ಈ ಮನೆಯಲ್ಲಿ ಗೃಹಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಪೊಲೀಸರು ಬಂಗಲೆಗೆ ತೆರಳಿದಾಗ ಆರಂಭದಲ್ಲಿ ಸರಣಿ ಹತ್ಯೆ ಮತ್ತು ನರಭಕ್ಷಕ ಕೃತ್ಯಗಳ ಜಾಲ ಎಂದು ಶಂಕಿಸಲಾದ ಪ್ರಕರಣಕ್ಕೆ ಸಂಬಂಧಿಸಿದ ಹಲವು ಸಾಕ್ಷ್ಯಗಳು ಪತ್ತೆಯಾಗಿದ್ದವು. ಮಕ್ಕಳನ್ನು ಆಮಿಷವೊಡ್ಡಿ ಕರೆದುಕೊಂಡು ಹೋಗಿ ಹತ್ಯೆ ಮಾಡಿ, ದೇಹಗಳನ್ನು ತುಂಡರಿಸಿ, ಕೆಲವೊಮ್ಮೆ ಬೇಯಿಸಿ ತಿಂದಿದ್ದಾರೆ ಎಂಬ ವದಂತಿಗಳು ವೇಗವಾಗಿ ಹರಡಿದ್ದವು. ಈ ಬೆಳವಣಿಗೆಯ ಬಳಿಕ ಪಂಧೇರ ಮತ್ತು ಕೋಲಿ ಇಬ್ಬರನ್ನೂ ಬಂಧಿಸಲಾಗಿತ್ತು.

ಪ್ರಮುಖ ಸುದ್ದಿ :-   17 ವರ್ಷದ ಬಾಲಕಿ ಮೇಲೆ ಅಪ್ರಾಪ್ತರು ಸೇರಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಕೊಲೆ ; ಶವವನ್ನು ತಿಂದ ನಾಯಿಗಳು

ತನಿಖೆಯಲ್ಲಿನ ಲೋಪಗಳು ಮತ್ತು ಖುಲಾಸೆ
ಕೋಲಿ ಮತ್ತು ಪಂಧೇರ ವಿರುದ್ಧ ಅತ್ಯಾಚಾರ, ಕೊಲೆ ಹಾಗೂ ಸಾಕ್ಷ್ಯ ನಾಶ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣಗಳು ದಾಖಲಾಗಿದ್ದವು. 2007ರಿಂದ 2010ರ ಅವಧಿಯಲ್ಲಿ ಸಿಬಿಐ ಒಟ್ಟು 19 ಪ್ರಕರಣಗಳನ್ನು ದಾಖಲಿಸಿತ್ತು.
ಹಲವು ಪ್ರಕರಣಗಳಲ್ಲಿ ಸುರಿಂದರ ಕೋಲಿಗೆ ಮರಣದಂಡನೆ ವಿಧಿಸಲಾಗಿದ್ದರೆ, ಮೋನಿಂದರ್ ಸಿಂಗ್ ಪಂಧೇರಗೆ ಕೆಲ ಪ್ರಕರಣಗಳಲ್ಲಿ ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಮೇಲ್ಮನವಿ ಪ್ರಕ್ರಿಯೆ ಮುಂದುವರಿದಂತೆ ತನಿಖೆಯಲ್ಲಿನ ವೈರುಧ್ಯಗಳು ಮತ್ತು ಪ್ರಕ್ರಿಯಾತ್ಮಕ ಲೋಪಗಳು ಬೆಳಕಿಗೆ ಬಂದವು.
2023ರ ಅಕ್ಟೋಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್ ವಿಶ್ವಾಸಾರ್ಹ ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ ಇಬ್ಬರನ್ನೂ ಖುಲಾಸೆಗೊಳಿಸಿತು. ಈ ತೀರ್ಪನ್ನು ಪ್ರಶ್ನಿಸಿ ಸಿಬಿಐ, ಉತ್ತರ ಪ್ರದೇಶ ಸರ್ಕಾರ ಹಾಗೂ ಸಂತ್ರಸ್ತರ ಕುಟುಂಬಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.
ಆದರೆ 2025ರಲ್ಲಿ ಸುಪ್ರೀಂ ಕೋರ್ಟ್ ಕೂಡ ಸುರಿಂದರ ಕೋಲಿಯನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ಪ್ರಕರಣದ ಭೀಕರ ಮತ್ತು ಅಮಾನುಷ ಸ್ವರೂಪವನ್ನು ನ್ಯಾಯಾಲಯ ಒಪ್ಪಿಕೊಂಡಿದ್ದರೂ, “ಅನುಮಾನ ಎಷ್ಟೇ ಗಂಭೀರವಾಗಿದ್ದರೂ, ಅದು ಸಂದೇಹಾತೀತವಾಗಿ ಆರೋಪ ಸಾಬೀತುಪಡಿಸುವ ದೃಢವಾದ ಸಾಕ್ಷ್ಯಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ” ಎಂದು ಹೇಳಿತ್ತು.

ಪ್ರಮುಖ ಸುದ್ದಿ :-   ಟಿಎಂಸಿ ಕಿತ್ತಾಟ : ಉಪಚುನಾವಣೆಗೆ ಪಕ್ಷದ ಹೆಸರು, ಚಿಹ್ನೆ ಬಳಸದಂತೆ ಎರಡೂ ಬಣಗಳಿಗೆ ಚುನಾವಣಾ ಆಯೋಗ ನಿರ್ಬಂಧ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement