ಬೆಂಗಳೂರು: ಸಮುದ್ರದಲ್ಲಿ ಸಿಗುವ ಅಂಬರ್‌ಗ್ರೀಸ್ ಎಂಬ ತಿಮಿಂಗಲದ ವಾಂತಿ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸಿದ 5 ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಅಂಬರ್‌ಗ್ರೀಸ್ ವಶಪಡಿಸಿಕೊಳ್ಳಲಾಗಿದೆ. ತಿಮಿಂಗಿಲ ಮೂಲದಿಂದ ಪಡೆಯುವ ಅಂಬರ್‌ಗ್ರೀಸ್ ಎಂಬ ಪದಾರ್ಥವನ್ನು ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಬಂಧಿತರನ್ನು ಬೆಂಗಳೂರಿನ ಮಜೀಬ್ಪಾಷಾ, ಮೊಹಮದ್ ಮುನ್ನಾ, ಗುಲಾಬ್ ಚಂದ್, ಸಂತೋಷ ಹಾಗೂ ಜಗನ್ನಾಥಚಾರ್ ಎಂದು ಗುರುತಿಸಲಾಗಿದೆ.
ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುವ ಅಂಬರ್ಗ್ರೀಸ್ಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಸಂಗ್ರಹಿಸಿಟ್ಟ ಖಚಿತ ಮಾಹಿತಿಯ ಮೇರೆಗೆ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಖಾಸಗಿ ಕಚೇರಿಯೊಂದರ ಮೇಲೆ ದಾಳಿ ಮಾಡಿದಾಗ ಅಂಬರ್‌ಗ್ರೀಸ್ ಗಟ್ಟಿ ಪತ್ತೆಯಾಗಿದೆ. ಸಿಸಿಬಿಯ ವಿಶೇಷ ವಿಚಾರಣಾ ದಳದ ಎಸಿಪಿ ಹನುಮಂತರಾಯ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶಿವಪ್ರಸಾದ್ ಅವರ ತಂಡವು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದೆ.
ಅಂಬರ್ಗೀಸ್ ಅಥವಾ ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳು (Amber Greece, Sperm Wale) ಮಾತ್ರ ಇಂತಹ ದ್ರವವನ್ನ ಹೊರ ಹಾಕುತ್ತದೆ. ಸ್ಪರ್ಮ್ ವೇಲ್ ತಿಮಿಂಗಿಲಗಳು ಕಾಟ್ಲಾ ಫಿಶ್, ಸ್ಕ್ಬಿಡ್ ಫಿಶ್ ಗಳನ್ನ ಮಾತ್ರ ಬೇಟೆಯಾಡಿ ತಿನ್ನುತ್ತವೆ. ತಿಂಗಳಾನುಗಟ್ಟಲೆ ಮೀನುಗಳ ಮುಳ್ಳುಗಳು ಜೀರ್ಣವಾಗುವುದಿಲ್ಲ. ಅವು ಹಲವು ತಿಂಗಳು ಹೊಟ್ಟೆಯಲ್ಲಿರುವುದುರಿಂದ ರಾಸಾಯನಿಕ ಪ್ರಕ್ರಿಯೆಗೆ ಒಳಪಡುತ್ತದೆ.
ನಂತರ ಅದು ಮೇಣದಂತೆ ರಚನೆಯಾಗುತ್ತದೆ. ಈ ಸಂದರ್ಭದಲ್ಲಿ ಅದು ಸುಗಂಧ ವಾಸನೆ ಹೊಂದುತ್ತವೆ. ಇದರಿಂದಾಗಿ ಸ್ಪರ್ಮ್ ತಿಮಿಂಗಿಲಗಳು ಹೊಟ್ಟೆಯಲ್ಲಿ ಕಸಿವಿಸಿ ಅನುಭವಿಸುತ್ತಿದ್ದಂತೆ ಇಡೀ ಮೇಣದ ವಸ್ತುವನ್ನ ವಾಂತಿ ಮಾಡುತ್ತವೆ. ಈ ವಾಂತಿ ಹಗುರವಾಗಿರುವುದರಿಂದ ಅದು ಸಮುದ್ರದಲ್ಲಿ ತೇಲಾಡುತ್ತದೆ. ಇಂತಹ ವಸ್ತುವನ್ನ ಸೈಂಟಿಫಿಕ್ ಆಗಿ ಅಂಬರ್‌ಗ್ರೀಸ್ ಎಂದು ಕರೆಯಲಾಗುತ್ತದೆ. ಕಾನೂನು ಪ್ರಕಾರ ಇದನ್ನು ಮಾರಾಟ ಮಾಡುವಂತಿಲ್ಲ. ಸಂಶೋಧನೆಗಾಗಿ ಮಾತ್ರ ಬಳಸಬಹುದು.
ಅಂಬರ್‌ಗ್ರೀಸ್ ಕಳ್ಳಸಾಗಣೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಜೂನ್‌ನಲ್ಲಿ ಕೆಜಿ ಹಳ್ಳಿ ಪೊಲೀಸರು 6.7 ಕೆಜಿ ಅಂಬರ್‌ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ಬಂಧಿಸಿದ್ದರು, ಇದರ ಮೌಲ್ಯ 8 ಕೋಟಿ ರೂ.ಗಳಾಗಿತ್ತು. ಅಂಬರ್‌ಗ್ರೀಸ್ ಅನ್ನು ಅತ್ಯಾಧುನಿಕ ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತದೆ. ಇದು ಕಂದು ಬಣ್ಣದಲ್ಲಿರುತ್ತದೆ ಮತ್ತು ಘನ ಮತ್ತು ಮೇಣದಂಥ ವಸ್ತುವನ್ನು ಹೊಂದಿರುತ್ತದೆ. ಸ್ಪರ್ಮ್ ತಿಮಿಂಗಿಲಗಳು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಅನುಸೂಚಿ 2 ರ ಅಡಿಯಲ್ಲಿ ಬರುವುದರಿಂದ, ದೇಶದಲ್ಲಿ ಅದರ ಯಾವುದೇ ಉಪ ಉತ್ಪನ್ನಗಳನ್ನು ಹೊಂದಿರುವುದು ಅಥವಾ ವ್ಯಾಪಾರ ಮಾಡುವುದು ಕಾನೂನುಬಾಹಿರ ಎಂದು ಸಿಸಿಬಿ ಹೇಳಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 80 ಕೋಟಿ ರೂ ಬೆಲೆ ಬಾಳುವ 80 ಕೆಜಿ ಅಂಬರ್ ಗ್ರೀಸ್ ವಸ್ತುವನ್ನು ಕಳ್ಳಸಾಗಣೆ ಮಾಡುತ್ತಿದ್ದ ಐವರನ್ನು ವಿಶೇಷ ತನಿಖಾ ದಳವು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಕಾರ್ಯಾಚರಣೆ ಕೈಗೊಂಡ ತಂಡಕ್ಕೆ 1 ಲಕ್ಷ ರೂ ಬೆಂಗಳೂರು ಪೊಲೀಸ್ ಕಮಿಶನರ್ ಕಮಲ್ ಪಂತ ಬಹುಮಾನ ಘೋಷಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ