
ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ಬೆನ್ನಲ್ಲೇ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagouda Patil Yatnal), ಸಾರ್ವಜನಿಕ ಸ್ಥಳಗಳು, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಯತ್ನಾಳ್, ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸರ್ಕಾರದ ಆಶಯ ಎಲ್ಲರಿಗೂ ಅನ್ವಯ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರವೇ ಪರಿಚಯಿಸಿರುವ ನಿಯಮಾವಳಿಗಳ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದೆಂದು ಮುಖ್ಯಮಂತ್ರಿಗಳಿಗೆ ಸವಿವರವಾಗಿ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ರಸ್ತೆಗಳು, ಬಸ್ ನಿಲ್ದಾಣ, ಪಾದಚಾರಿ ಮಾರ್ಗಗಳಲ್ಲಿ ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ನೋಡುತ್ತಿದ್ದೇವೆ. ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸಿದಂತೆ ನಮಾಜ್ ಮಾಡುವುದನ್ನೂ ನಿಷೇಧಿಸಬೇಕು. ಹಾಗೆ ಮಾಡಿದಾಗಲೇ ನೀವು ನಿಜವಾದ ಜಾತ್ಯತೀತರು ಎಂದು ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಯತ್ನಾಳ ಹೇಳಿದ್ದಾರೆ.
ಧಾರ್ಮಿಕ ಉದ್ದೇಶಗಳಿಗಾಗಿ ಸಾರ್ವಜನಿಕ ಸ್ಥಳಗಳನ್ನು ಅನಧಿಕೃತವಾಗಿ ಬಳಸುವುದನ್ನು ತಡೆಯಲು ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಸಂಬಂಧಿತ ಸಂಚಾರ ನಿಯಮಗಳ ಅಡಿಯಲ್ಲಿ ಸ್ಪಷ್ಟವಾದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP) ಅಥವಾ ಸುತ್ತೋಲೆಯನ್ನು ರೂಪಿಸಲು ಸರ್ಕಾರ ಮುಂದಾಗಬೇಕು. ಕಾನೂನು, ಸುವ್ಯವಸ್ಥೆ ಹಾಗೂ ಸಂಚಾರಕ್ಕೆ ಅಡಚಣೆಯನ್ನು ತಪ್ಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ತಕ್ಷಣವೇ ನಿಷೇಧಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಪತ್ರದಲ್ಲಿ ಕೋರಿದ್ದಾರೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘ, ಸಂಸ್ಥೆಗಳ ಚಟುವಟಿಕೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ