ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಸಮೃದ್ಧ ಭಾರತ ನಿರ್ಮಾಣದ ಐತಿಹಾಸಿಕ ಬಜೆಟ್ : ಪ್ರಲ್ಹಾದ ಜೋಶಿ

 

ಹುಬ್ಬಳ್ಳಿ :   ಕೇಂದ್ರ ಅರ್ಥ ಸಚಿವೆ  ನಿರ್ಮಲಾ ಸೀತಾರಾಮನ್  ಮಂಡಿಸಿದ ೨೦೨೧-೨೨ನೇ ಸಾಲಿನ ಆಯವ್ಯಯ ಆರೋಗ್ಯ ಹಾಗೂ ಸಮೃದ್ಧ ಭಾರತ ನವನಿರ್ಮಾಣದ ದಿಸೆಯಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ  ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.
ಈ ಅಯವ್ಯಯದಲ್ಲಿ ಆರು ಮುಖ್ಯ ಆಧಾರ ಸ್ಥಂಭಗಳನ್ನು ಪರಿಚಯಿಸಿದ ಅರ್ಥಸಚಿವರು ಇದರ ಒಟ್ಟು ಸಾರವಾಗಿ ಈ ದಶಮಾನದ ಪ್ರಥಮ ಅಯವ್ಯಯ ಹೇಗೆ ಕೋವಿಡ್ ನಂತರದ ಭಾರತ ದೇಶ ಮುಂಬರುವ ವರ್ಷಗಳಲ್ಲಿ ಆರೋಗ್ಯ ಹಾಗೂ ಸಮೃದ್ಧ ಭಾರತವಾಗಿ ಆತ್ಮ ನಿರ್ಭರ ದೇಶವಾಗಿ ಹೊರ ಹೊಮ್ಮುವುದೆಂಬುದರ ಬಗ್ಗೆ  ವಿಸ್ತೃತವಾಗಿ ವಿವರಿಸಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ನವಭಾರತ ನಿರ್ಮಾಣದಲ್ಲಿ ಆರೋಗ್ಯ, ಕೃಷಿ ಹಾಗೂ ಮೂಲಭೂತ ನಿರ್ಮಾಣ ಮುಖ್ಯ ಆಧಾರ ಸ್ಥಂಭಗಳೆಂಬುದನ್ನು ಗುರುತಿಸಿದ ಈ ಅಯವ್ಯಯ ಈ ಮೂರು ಕ್ಷೇತ್ರಗಳಿಗೆ ದಾಖಲೆಯ ಅನುದಾನ ನೀಡಿರುವುದು ಸ್ಪಷ್ಟ. ಆರೋಗ್ಯ ಕ್ಷೇತ್ರಕ್ಕೆ ಐತಿಹಾಸಿಕ ರೂ.  ೨.೨೭ ಲಕ್ಷ ಕೋಟಿ ಅನುದಾನ  ಅಂದರೆ ೧೩೭% ಹೆಚ್ಚಾಗಿದ್ದು ಗಣನೀಯವಾಗಿದೆ. ಅದೇ ರೀತಿ ಕೃಷಿ ಸಾಲದ ಮೊತ್ತವನ್ನು ೧೬.೫ ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿ ದೇಶದ ಕೃಷಿ ಹಾಗೂ ರೈತರಿಗೆ ಕೃಷಿ ಸಮೃದ್ಧಿ ಹೆಬ್ಬಾಗಿಲು ತೆರೆದಿಟ್ಟಿದೆ ಎಂದೂ ಹೇಳಿರುವ ಜೋಶಿ, ಮೂಲಭೂತ ಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ದಾಖಲೆಯ ಅನುದಾನ ನೀಡುವ ಮೂಲಕ ಹೊಸ ಶೆಕೆ ಆರಂಭಕ್ಕೆ ನಾಂದಿ ಹಾಡಿದ್ದಾರೆ. ೧೧,೫೦೦ ಹೆದ್ದಾರಿ ನಿರ್ಮಾಣದ ಘೋಷಣೆ ಮಾಡಲಾಗಿದೆ. ಹಾಗೂ ರೈಲ್ವೇ ಅಭಿವೃದ್ಧಿಗಾಗಿ ರೂ. ೧.೧೦ ಲಕ್ಷ ಕೋಟಿ ಬಂಡವಾಳ ಅನುದಾನ, ರೂ. ೧.೯೭ ಲಕ್ಷ ಕೋಟಿ ಮೂಲ ಸೌಕರ್ಯ ನಿರ್ಮಾಣಕ್ಕೆ ಅನುದಾನ, ೭ ಹೊಸ ಜವಳಿ ಘಟಕಗಳ ಘೋಷಣೆ ಹೊಸ ಸಮೃದ್ಧ ಭಾರತದತ್ತ ದಿಟ್ಟ ಹೆಜ್ಜೆಗಳಾಗಿವೆ ಎಂದಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ೧೫ ತ್ವರಿತ ಆರೋಗ್ಯ ಕೇಂದ್ರಗಳ, ಮಿಷನ್ ಪೋಷಣೆ, ವೈರಾಲಜಿ ಸಂಸ್ಥೆಗಳ ಆರಂಭ ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರದ ಸ್ಥಾಪನೆ, ಕೋವಿಡ್ ಲಸಿಕೆಗಾಗಿ  ೩೫೦೦೦ ಕೋಟಿ ರೂ.ಗಳ  ಅನುದಾನ ತೆಗೆದಿರುಸುವಂತಹ ಕ್ರಮಗಳು ದೇಶದ ಜನತೆಯ ಆರೋಗ್ಯ ರಕ್ಷಣೆಯ ಬದ್ಧತಾ ಘೋಷಣೆಗಳಾಗಿವೆ. ಬೆಂಗಳೂರು ಚನ್ನೈ ಮೆಟ್ರೋ ರೈಲುಗಳ ವಿಸ್ತರಣೆಗೆ ಅನುದಾನದ ಕ್ರಮಗಳು, ದೇಶದಲ್ಲಿ ಈಗಾಗಲೇ ೧೩೦೦೦ ಕಿಮಿ ಗಳ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿರುವಾಗಲೇ ಮತ್ತೆ ೧೧೫೦೦ ಕಿಮಿ ಅಂತರದ ಹೊಸ ಹೆದ್ದಾರಿ ನಿರ್ಮಾಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರೂ ೧.೧೮ ಲಕ್ಷ ಕೋಟಿಗಳ ಅನುದಾನ ಇತ್ಯಾದಿ ಕ್ರಮಗಳು ಸಮೃದ್ದ ಭಾರತ ನಿರ್ಮಾಣಕ್ಕೆ ಮುಖ್ಯ ಮಾರ್ಗವಾಗಿದೆಯೆಂದು   ಜೋಶಿ ಹೇಳಿದ್ದಾರೆ.
ಸಾಮಾನ್ಯವಾಗಿ ಆಹಾರ ಧಾನ್ಯ ಖರೀದಿಗೆ ೧,೪೧,೯೩೦ ಕೋಟಿ ರೂ. ತಗುಲುತ್ತದೆ. ಆದರೆ ಈ ವರ್ಷ ಈ ಮೊತ್ತವನ್ನು ೧,೭೨,೦೮೧ ಕೋಟಿ ಹೆಚ್ಚಿಸಲಾಗಿದೆ. ಭತ್ತ ಮತ್ತು ಗೋದಿ ಖರೀದಿಗೆ ಹೆಚ್ಚಿನ ಹಣ ಮೀಸಲಿಡಲಾಗಿದೆ. ಕನಿಷ್ಠ ಬೆಂಬಲಬೆಲೆ ಹೆಚ್ಚಳವು ದೇಶದ ೪೩ ಕೋಟಿ ರೈತರ ಆದಾಯವನ್ನು ಹೆಚ್ಚಿಸಲಿದೆ. ಎಂದಿರುವ ಜೋಶಿ, ಕೊರೋನಾ ವೈರಸ್ ಸೋಂಕಿನ ಸಂಕಷ್ಟದ ನಡುವೆ ಆರ್ಥಿಕವಾಗಿ ಹೊಡೆತ ಅನುಭವಿಸಿದ ವಿವಿಧ ವಲಯಗಳ ಜನರು, ಉದ್ಯಮಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸಿತ್ತು, ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಹಣಕಾಸು‌ ವಲಯದ ಪುನಶ್ಚೇನಕ್ಕೆ ಕ್ರಮಗಳನ್ನು ತೆಗೆದುಕೊಂಡಿತ್ತು. ಅರ್ಥ ಸಚಿವೆ  ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಇದನ್ನು ಪ್ರಸ್ತಾಪಿಸಿ, ಎಲ್ಲ ಕೋವಿಡ್ ನಿರ್ವಹಣಾ ಕ್ರಮಗಳಿಗೆ ಘೋಷಿಸಿದ ಒಟ್ಟು ಅಂದಾಜು ಮೊತ್ತ ೨೭.೧ಲಕ್ಷ ಕೋಟಿ. ಇದು ದೇಶದ ಜಿಡಿಪಿಯ ಶೇ ೧೩ರಷ್ಟು ವೆಚ್ಚವಾಗಲಿದೆ ಎಂದೂ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿರುವುದು ಆರ್ಥಿಕ ಪುನಶ್ಚೇನಕ್ಕೆ ಹೊಸ ಮೆರಗು ಬರಲಿದೆ ಎಂದೂ ಜೋಶಿ ಬಣ್ಣಸಿದ್ದಾರೆ.
ಯುವಕರಿಗೆ ಉದ್ಯೋಗಾವಕಾಶ ಹೆಚ್ಚಳಕ್ಕೆ ವಿಶೇಷ ಯೋಜನೆ, ಆರೋಗ್ಯ ಕ್ಷೇತ್ರ ಬಲಪಡಿಸಲು ೬೪,೧೮೦ ಕೋಟಿ, ೫೦೦ ಅಮೃತ್ ನಗರಗಳಲ್ಲಿ ೨.೮೬ ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸುವುದು – ಇವೆಲ್ಲವೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ಖಚಿತ ಎಂದೂ ಜೋಶಿ ಹೇಳಿದ್ದಾರೆ.
ಈ ಭಾರಿ ಅಯವ್ಯದಲ್ಲಿ ಪ್ರಮುಖವಾಗಿ ಜಲಜೀವನ್ ಮಿಷಿನ್ (ನಗರ) ಯೋಜನೆ ಘೋಷಣೆ ಮೂಲಕ ದೇಶದ ೪೩೭೮ ನಗರಗಳಲ್ಲಿನ ೨೦೮೬ ಕೋಟಿ ಮನೆಗಳಿಗೆ ನೇರವಾಗಿ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ರೂಪಿಸಲಾಗಿರುವುದು ಶ್ಲ್ಯಾಘನೀಯವೆಂದು ಜೋಶಿ ಹೇಳಿದ್ದಾರೆ.
ಈ ರೀತಿ ಆರೋಗ್ಯ ಕೃಷಿ ಹಾಗೂ ಮೂಲಭೂತ ಸೌಲಭ್ಯಗಳಿಂದ ಭರಿತವಾದ ನವ ಭಾರತ ನಿರ್ಮಾಣ ಹಾಗೂ ತನ್ಮೂಲಕ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ಆತ್ಮನಿರ್ಭರ ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಈ ದಶಕದ ಮೊದಲ ಅಯವ್ಯಯ ದೇಶದ ಭಾಗ್ಯದ ಬಾಗಿಲು ತೆರೆದು ಹೊಸ ಶೆಕೆಯ ಆರಂಭಕ್ಕೆ ನಾಂದಿ ಹಾಡಲಿದೆ ಎಂದು  ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಇಸ್ರೇಲ್‌-ಇರಾನ್‌ ಉದ್ವಿಗ್ನತೆ ನಡುವೆ 17 ಭಾರತೀಯರಿದ್ದ ಹಡಗನ್ನು ಯುಎಇ ಕರಾವಳಿಯಲ್ಲಿ ವಶಪಡಿಸಿಕೊಂಡ ಇರಾನ್ : ಮೂಲಗಳು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement