ಮೀಸಲು ಚರ್ಚೆಗೆ ಅವಕಾಶಕ್ಕೆ ಒತ್ತಾಯಿಸಿ ಸದನದಲ್ಲಿ ಧರಣಿ

ಬೆಂಗಳೂರು: ರಾಜ್ಯದಲ್ಲಿ ಬೇರೆ ಬೇರೆ ಸಮುದಾಯವರು ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆ ಕುರತು ಚರ್ಚೆಗೆ ಅವಕಾಶ ನೀಡುವಂತೆ ಹಾಗೂ ಅವರ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಂತೆ ಒತ್ತಾಯಿಸಿ ಆಡಳಿತ ಪಕ್ಷದವರು  ಪ್ರತಿಪಕ್ಷ ಸದಸ್ಯರ ಜತೆಗೆ ಧರಣಿಗೆ ನಡೆಸಿರುವುದಕ್ಕೆ ಮಂಗಳವಾರ ಸಾಕ್ಷಿಯಾಯಿತು.

ಶೂನ್ಯವೇಳೆಯಲ್ಲಿ ಬಿಜೆಪಿಯ ರೆಬೆಲ್‌ ಶಾಸಕ ಎಂದೇ ಗುರುತಿಸಿಕೊಂಡಿರುವ  ಬಸನಗೌಡ ಪಾಟೀಲ್ ಯತ್ನಾಳ್ ವಿಷಯ ಪ್ರಸ್ತಾಪಿಸಿದರು. ಪಂಚಮಸಾಲಿಗರನ್ನು 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ  ಸಮುದಾಯದ ಮುಖಂಡರು ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿದ್ದಾರೆ.  ಆರ್ಥಿಕ ಮತ್ತು ಶಿಕ್ಷಣದ ಮೀಸಲಾತಿಗಾಗಿ ಪಾದಯಾತ್ರೆ ಆರಂಭಗೊಂಡಿದೆ. ಅದೇ ರೀತಿ ಹಾಲುಮತದ ಕುರುಬ ಸಮುದಾಯದವರು ಪರಿಶಿಷ್ಟ ಪಂಗಡದ ಮೀಸಲಿಗೆ  ಪಾದಯಾತ್ರೆ ಕೈಗೊಂಡಿದ್ದಾರೆ. ಎಸ್ ಟಿ  ಮೀಸಲು ಹೆಚ್ಚಳ ಮಾಡಬೇಕು ಎಂದೂ ಪಾದಯಾತ್ರೆ ನಡೆಯುತ್ತಿದೆ. ಆದ್ದರಿಂದ ಈ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕು ಹಾಗೂ ಈ ಬೇಡಿಕೆಯನ್ನು ಕಾಲಮಿತಿಯಲ್ಲಿ ಈಡೇರಿಸುವ ಭರವಸೆ ಬೇಕು ಎಂದು ಒತ್ತಾಯಿಸಿದರು.

ಆಗ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಇದು ಶೂನ್ಯವೇಳೆ. ಇಲ್ಲಿ ವಿಷಯ ಪ್ರಸ್ತಾಪಿಸಬಹುದು. ಆದರೆ ಚರ್ಚೆಗೆ ಅವಕಾಶವಿಲ್ಲ ಎಂದರು.  ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇಡೀ ರಾಜ್ಯದಲ್ಲಿ ಪಾದಯಾತ್ರೆ ನಡೆಯುತ್ತಿರುವುದರಿಂದ ಈ ಬಗ್ಗೆ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ಜನವರಿ 14ರಿಂದ ಸ್ವಾಮೀಜಿಗಳು ಪಾದಯಾತ್ರೆ ಆರಂಭಿಸಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎಗೆ, ಕುರುಬರನ್ನು ಎಸ್.ಟಿ.ಗೆ ಸೇರಿಸಲು ಹೋರಾಟ ನಡೆಯುತ್ತಿದೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ಮೀಸಲಾತಿ ನೀಡುವ ವಿಷಯದಲ್ಲಿ ಸುಪ್ರೀಂಕೋರ್ಟ್ ನಿಯಮಗಳನ್ನು ರೂಪಿಸಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ  ಶೀರ್ಘ  ತೀರ್ಮಾನಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದಕ್ಕೆ ತೃಪ್ತಿಯಾಗದ ಅ  ಯತ್ನಾಳ್, ಜೆಡಿಎಸ್ನ ಬಂಡೆಪ್ಪ ಕಾಶೆಂಪೂರ್, ಕಾಂಗ್ರೆಸ್ ನ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಮೂರೂ ಪಕ್ಷಗಳ ಕೆಲವು ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಆಗ ಸ್ಪೀಕರ್, ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ. ವಿಷಯದ ಗಂಭೀರತೆ ಮತ್ತು ಸೂಕ್ಷ್ಮತೆಯ ಆಧಾರದಲ್ಲಿ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು. ಈ ಕುರಿತು ಲಿಖಿತವಾಗಿ ಬರೆದು ಕಳುಹಿಸದರೆ   ಅರ್ಧ ತಾಸು  ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಭರವಸೆ ನಂತರ ಸದಸ್ಯರು ಧರಣಿ ಕೈಬಿಟ್ಟರು.

ಪ್ರಮುಖ ಸುದ್ದಿ :-   ಭಾರಿ ಮಳೆ ಮುನ್ಸೂಚನೆ ; ಕರ್ನಾಟಕದ ಐದು ಜಿಲ್ಲೆಗಳಿಗೆ ಇಂದು ರೆಡ್‌ ಅಲರ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement