ಬೆಂಗಳೂರು: ರಾಜ್ಯ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟವು ಧೋರಣೆ ಹೀಗೆ ಮುಂದುವರಿದರೆ ಮತ್ತೊಂದು ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ, ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರಿನಲ್ಲಿ ಮುಷ್ಕರದ ನಡೆದಾಗ ಮೂರು ತಿಂಗಳೊಳಗೆ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ 45 ದಿನವಾದರೂ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ. ಉಳಿದ 45 ದಿನಗಳೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಹೋರಾಟಕ್ಕೆ ಇಳಿಯವುದು ಅನಿವಾರ್ಯ ವಾಗುತ್ತದೆ ಹೇಳಿದರು.
ಮುಷ್ಕರ ಮುಗಿದು ಭರವಸೆ ನೀಡಿ 45 ದಿನ ಕಳೆದರೂ ಯಾವುದೇ ಬೇಡಿಕೆ ಈಡೇರಿಸದಿರುವುದರಿಂದ ನೌಕರರಲ್ಲಿ ಅನುಮಾನ ಮೂಡತೊಡಗಿದೆ. 45 ದಿನಗಳು ಕಾಲಾವಕಾಶವಿದೆ. ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದರು.
ಮುಷ್ಕರದ ಸಮಯದಲ್ಲಿ ನೌಕರರ ಮೇಲೆ ದಾಖಲಿಸಿರುವ ಪೊಲೀಸ್ ದೂರುಗಳನ್ನು ಹಿಂಪಡೆಯಬೇಕು. ನೌಕರರ ಆಮಾನತು ಆದೇಶವನ್ನು ಹಿಂಪಡೆಯಬೇಕು, ಅವೈಜ್ಞಾನಿಕ ಪಾಳಿ ಪದ್ದತಿ ರದ್ದುಪಡಿಸಬೇಕು, ಅನುಚಿತವಾಗಿ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ, ಮಹಿಳಾ ಸಿಬ್ಬಂದಿ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ಸೃಷ್ಟಿ ಮಾಡುವುದು, ಅರ್ಧ ವೇತನ ಮತ್ತು ತಡವಾಗಿ ನೀಡುವ ವೇತನವನ್ನು ಕೈಬಿಟ್ಟು ಸಮಯಕ್ಕೆ ಸರಿಯಾಗ ವೇತನ ನೀಡುವುದು ಹೀಗೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ