ಬಿಜೆಪಿ ಸರ್ಕಾರ ಕೆಟ್ಟು ನಿಂತಿರುವ ಡಕೋಟಾ ಬಸ್:ಸಿದ್ದರಾಮಯ್ಯ

ಬೆಂಗಳೂರು:  ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಈ ಸರ್ಕಾರ ಕೆಟ್ಟು ನಿಂತಿರುವ ಡಕೋಟಾ ಬಸ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿ,   ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್‌ಶೆಟ್ಟರ್ ಅವರು ಸರ್ಕಾರ ಟೇಕ್ ಆಫ್ ಆ‌ಗಿಲ್ಲ ಎಂದು ಟೀಕಿಸುತ್ತಿದ್ದರು. ಈಗಿನ ಬಿಜೆಪಿ ಸರ್ಕಾರ ಟೇಕ್ ಆಫ್ ಆಗುವುದಿರಲಿ, ಆಫೇ ಆಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ  ಕೆಟ್ಟು ನಿಂತಿರುವ ಡಕೋಟಾ ಬಸ್. ಯಾರಿಂದಲೂ ರಿಪೇರಿ ಮಾಡಲು ಸಾಧ್ಯವಿಲ್ಲ. ಬಸ್  ಬದಲಿಸಬೇಕು ಅಷ್ಟೆ ಎಂದರು.
ಈ ಸರ್ಕಾರ ಬಂದು ೧೮ ತಿಂಗಳಾಗಿದೆ.  ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಒಂದೇ ಒಂದು ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಿಲ್ಲ. ನಾನು ಮುಖ್ಯಮಂತ್ರಿಯಾದ ತಕ್ಷಣ ಅರ್ಧ ಗಂಟೆಯಲ್ಲಿ ೫ ಭರವಸೆಗಳನ್ನು ಈಡೇರಿಸಿದ್ದೆ ಎಂದು ಹೇಳಿದರು.
ರಾಜ್ಯಪಾಲರ ಭಾಷಣದಲ್ಲಿ ಏನನ್ನೂ ಹೇಳಿಲ್ಲ. ಕೃಷಿ ಬಗ್ಗೆಯೂ ಪ್ರಸ್ತಾಪಿಸಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾದರು. ರೈತರಿಗೆ ಏನಾದರೂ ಮಾಡಿದ್ದಾರಾ, ರೈತರ ಸಾಲ ಮನ್ನಾ ಮಾಡಿದ್ದಾರಾ,  ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ರೈತರ ೫೦ ಸಾವಿರ ಸಾಲ ಮನ್ನಾ ಮಾಡಿದ್ದೆ. ಯಡಿಯೂರಪ್ಪ ರೈತರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯಾದ ೨೪ ಗಂಟೆಯೊಳಗೆ ಮಹದಾಯಿ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದರು. ಎಷ್ಟು ೨೪ ಗಂಟೆ ಕಳೆದಿದೆ. ಗೋವಾದಲ್ಲೂ ಬಿಜೆಪಿ ಸರ್ಕಾರ, ಕೇಂದ್ರದಲ್ಲೂ ಬಿಜೆಪಿ ಸರ್ಕಾರ. ಮಹದಾಯಿ ಸಮಸ್ಯೆ ಬಗೆಹರಿಸಬಹುದಿತ್ತಲ್ಲ ಎಂದರು.
ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಪೈಕಿ ಗೋಹತ್ಯೆ ನಿಷೇಧ ಕಾಯ್ದೆ ಬಿಟ್ಟು ಯಾವ ಭರವಸೆಯೂ ಈಡೇರಿಲ್ಲ ಎಂದು ಬಿಜೆಪಿ ನೀಡಿರುವ ಭರವಸೆಗಳ ಪಟ್ಟಿಯನ್ನು ಸಿದ್ದರಾಮಯ್ಯ ಸದನದಲ್ಲಿ ಓದಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಲಾಗಿದೆ. ೬೩ ಸಾವಿರ ಕೋಟಿ ರೂ. ಸಾಲ ತೆಗೆದುಕೊಂಡಿದ್ದಾರೆ ಎಂದರು.
ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯಮಂತ್ರಿಯ ಬಂಧನಕ್ಕೆ ತಡೆ ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಸದನದಲ್ಲಿ ಬಿರುಸಿನ ಚರ್ಚೆಗಳು ನಡೆದವು.
ವಿರೋಧ ಪಕ್ಷದ ನಾಯಕರು ಕೇಸಿನ ತಿರುಳನ್ನು ಮಾತನಾಡುವ ಅಗತ್ಯವಿಲ್ಲ. ಅದು ಹಳೆಯ ಪ್ರಕರಣ. ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸಬ್‌ಜೂಡಿಸ್ ಆಗುತ್ತದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಕೆಲಹೊತ್ತು  ಆರೋಪ-ಪ್ರತ್ಯಾರೋಪಗಳು ನಡೆದವು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement