ಬೆಂಗಳೂರು: ಮಳೆ ನೀರು ಸಂಗ್ರಹಿಸಲು ಸರ್ಕಾರಿ ಕಟ್ಟಡಗಳ ಛಾವಣಿ ಸ್ವರೂಪ ಬದಲಾವಣೆ ಮಾಡಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಹರತಾಳ್ ಹಾಲಪ್ಪ ಮಲೆನಾಡಿನ ಭಾಗಗಳಲ್ಲಿ ಮಳೆಗಾಲ ಬಂದರೆ ಕಾಲೇಜುಗಳು, ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಕಟ್ಟಡಗಳು ಸೋರುತ್ತವೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಗೆ ಮನವಿ ಮಾಡಿದರು.
ಈ ವೇಳೆ ಸಭಾಧ್ಯಕ್ಷ ಕಾಗೇರಿ ಮಾತನಾಡಿ, ಮಲೆನಾಡಿನ ಭಾಗಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಿದೆ. ಮಳೆಗಾಲ ಆರಂಭವಾದರೆ ಸರ್ಕಾರಿ ಕಟ್ಟಡಗಳಲ್ಲಿ ನೀರು ಸೋರಿಕೆಯಾಗುತ್ತದೆ. ಇದಕ್ಕೆ ಒಂದು ಪರಿಹಾರ ಕಲ್ಪಿಸಬೇಕೆಂದು ಸದನದಲ್ಲಿದ್ದ ಸಚಿವ ಗೋವಿಂದ ಕಾರಜೋಳ ಅವರಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ಇನ್ನು ಮುಂದೆ ಸರ್ಕಾರಿ ಕಟ್ಟಡಗಳ ವಿನ್ಯಾಸ ಹಾಗೂ ಛಾವಣಿ ಸ್ವರೂಪವನ್ನು ಬದಲಾವಣೆ ಮಾಡುವಂತೆ ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಲಾಗುವುದು ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ