ದಾವಣಗೆರೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಬೇನಾಮಿ ಹಣ ಪತ್ತೆಯಾಗಿದ್ದು, ಅಜಾದ್ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಕೆಆರ್ ರಸ್ತೆಯ ಗ್ಯಾಲಕ್ಸಿ ಶಾದಿ ಮಹಲ್ ಬಳಿಯಲ್ಲಿ ಈ ಹಣ ಪತ್ತೆಯಾಗಿದ್ದು, ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 1.47 ಕೋಟಿ ರೂ.ಮೌಲ್ಯದ ಹಣವನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.
ಗ್ಯಾಲಕ್ಸಿ ಶಾದಿ ಮಹಲ್ ಬಳಿ ಎಎಸ್‍ಐ ಜಗನ್ನಾಥ್, ಕಾನ್‍ಸ್ಟೆಬಲ್ ಆಂಜನೇಯ, ರವಿ, ರುದ್ರೇಶ್ ಗುಡಿಕೇರಿ ಕರ್ತವ್ಯದಲ್ಲಿದ್ದಾಗ ಕಲಬುರಗಿ ಕಡೆಯಿಂದ ದಾವಣಗೆರೆಗೆ ಬರುತ್ತಿದ್ದ ಕಾರು ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಆರೋಪಿಗಳನ್ನು ಕೆಳಗೆ ಇಳಿಸಿ ತಪಾಸಣೆ ನಡೆದಾಗ ಮೂರು ಬ್ಯಾಗ್‍ಗಳಲ್ಲಿ ಹಣ ಇರುವುದು ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಮಹೇಶ್ (25), ಬೀರಲಿಂಗ (23) ಶ್ರೀಕಾಂತ್ (26) ಬಂಧಿತರು.
ಹಣದ ಬಗ್ಗೆ ದಾಖಲೆ ಕೇಳಿದಾಗ ಸರಿಯಾದ ಮಾಹಿತಿ ನೀಡದೆ ಇರುವುದರಿಂದ ಈ ಬಗ್ಗೆ ಹಿರಿಯ ಅಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಆರೋಪಿಗಳನ್ನು ಆಜಾದ್ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು.
ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ಥಳಕ್ಕೆ ನಗರ ಡಿವೈಎಸ್‍ಪಿ ನಾಗೇಶ್ ಐತಾಳ್ ಭೇಟಿ ನೀಡಿ ಪರಿಶೀಲಿಸಿದರು. ಸರಿಯಾದ ದಾಖಲೆಗಳು ಇಲ್ಲದ ಕಾರಣ ತನಿಖೆ ನಡೆಸಲು ತೆರಿಗೆ ಇಲಾಖೆಗೆ ಹಣ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಹನುಮಂತರಾಯ ತಿಳಿಸಿದ್ದಾರೆ. ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ