ಆಸ್ಸಾಂ: ಕೆಲ ವಿದೇಶಿ ಶಕ್ತಿಗಳು ನಮ್ಮ ಭಾರತೀಯ ಚಹಾದ ಘನತೆ ಕುಂದಿಸುಲ್ಲಿ ನಿರತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಆಸ್ಸಾಂನಲ್ಲಿ ಚಹಾ ತೋಟಗಳ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಅಸ್ಸಾಂ ಚಹಾದ ವಿರುದ್ಧ ಕೆಲ ವಿದೇಶಿ ಶಕ್ತಿಗಳು ಪಿತೂರಿ ನಡೆಸಿವೆ. ಭಾರತೀಯ ಚಹಾದ ಘನತೆಯನ್ನು ವಿಶ್ವಾದ್ಯಂತ ವ್ಯವಸ್ಥಿತವಾಗಿ ಹಾಳು ಮಾಡುವಲ್ಲಿ ಕೆಲ ಶಕ್ತಿಗಳು ನಿರತವಾಗಿವೆ ಎಂದರು.
ಕೆಲ ವಿದೇಶಿ ಶಕ್ತಿಗಳು ನಮ್ಮ ಚಹಾದ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿರುವ ಬಗ್ಗೆ ನಮಗೆ ಕೆಲ ದಾಖಲಾತಿಗಳು ದೊರೆತಿವೆ. ಈ ಕುರಿತು ಮೌನ ವಹಿಸಿರುವ ಬಗ್ಗೆ ರಾಜಕೀಯ ಪಕ್ಷಗಳಿಂದ ಎಲ್ಲರೂ ಸ್ಪಷ್ಟನೆ ಕೇಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ೧೨೦೦೦ರೂ. ಆರ್ಥಿಕ ನೆರವು ನೀಡುವ ಯೋಜನೆಯನ್ನು ಪ್ರಧಾನಿ ಉಲ್ಲೇಖಿಸಿದರು. ಚಹಾ ತೋಟಗಳಿಗೆ ವೈದ್ಯಕೀಯ ಘಟಕಗಳನ್ನು ಕಳಿಸಲಾಗುವುದಲ್ಲದೇ ಉಚಿತವಾಗಿ ಕಾರ್ಮಿಕರಿಗೆ ಔಷಧ ಪೂರೈಸಲಾಗುತ್ತದೆ ಎಂದರು.
ಅಸ್ಸಾಂನ ಚಹಾ ಸಮುದಾಯದ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ₹ 1,000 ಕೋಟಿ ಮೊತ್ತದ ವಿಶೇಷ ಯೋಜನೆಯನ್ನು ಘೋಷಿಸಲಾಗಿದೆ ಎಂದು ಹೇಳಿದ ಅವರು, ಇದು ಕಾರ್ಮಿಕರ ಜೀವನವನ್ನು ಸರಳಗೊಳಿಸುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯಾನಂತರ ಈವರೆಗೆ ೭೦ ವರ್ಷಗಳಲ್ಲಿ ಆಸ್ಸಾಂನಲ್ಲಿ ಕೇವಲ ೬ ವೈದ್ಯಕೀಯ ಕಾಲೇಜುಗಳಿದ್ದವು. ಕಳೆದ ಐದು ವರ್ಷಗಳಲ್ಲಿ ನೂತನ ೬ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ. ಇದರಿಂದ ಪ್ರತಿವರ್ಷ ೧೬೦೦ ವೈದ್ಯರು ರೂಪಗೊಳ್ಳಲು ನೆರವಾಗುತ್ತದೆ ಎಂದು ನುಡಿದರು.
ನಿಮ್ಮ ಕಾಮೆಂಟ್ ಬರೆಯಿರಿ