ಹೊಸ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರೈತ ಹೋರಾಟಗಾರರು ಮುಂದಿನ ಸುತ್ತಿನ ಮಾತುಕತೆಗೆ ನಾವು ಸಿದ್ಧರಾಗಿದ್ದಾರೆ. ಅದಕ್ಕೆ ಸರ್ಕಾರ ದಿನಾಂಕ ನಿಗದಿ ಪಡಿಸಲಿ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ಸದಸ್ಯ ಶಿವಕುಮಾರ ಕಕ್ಕಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರೈತರ ಹೋರಾಟವನ್ನು ಕೊನೆಗೊಳಿಸಿ, ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಹಿಂದೆ ಮಾತುಕತೆಗೆ ಕರೆದಾಗೆಲ್ಲ ನಾವು ಹೋಗಿದ್ದೇವೆ. ಮುಂದೆ ಮಾತುಕತೆಗೆ ಸರಕಾರ ದಿನಾಂಕವನ್ನು ನಿಗದಿಪಡಿಸಬೇಕು. ವಿವಾದಾತ್ಮಕ ಕಾನೂನುಗಳ ಬಗ್ಗೆ ಈಗಾಗಲೇ ೧೧ ಸುತ್ತಿನ ಮಾತುಕತೆ ನಡೆದಿದೆ. ಸಂವಾದದ ಮೂಲಕ ಯಾವುದೇ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ರೈತ ಸಂಘಟನೆಗಳು ತಮ್ಮ ಬೇಡಿಕೆಗಳ ಕುರಿತು ದೃಢವಾಗಿರುವುದರಿಂದ ಬಿಕ್ಕಟ್ಟು ಮುಂದುವರೆಯುತ್ತಿದೆ. ಮೂರು ವಿವಾದಾತ್ಮಕ ಕಾನೂನುಗಳನ್ನು ರದ್ದುಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಜಾರಿಗೊಳಿಸಬೇಕು ಎಂದು ಶಿವಕುಮಾರ ಹೇಳಿದರು.
ಕೊನೆಯ ಸುತ್ತಿನ ಮಾತುಕತೆಯಲ್ಲಿ, ಸರ್ಕಾರವು 12-18 ತಿಂಗಳುಗಳವರೆಗೆ ಕಾನೂನುಗಳನ್ನು ಅಮಾನತಿನಲ್ಲಿಡಲು ಮುಂದಾಗಿತ್ತು, ಆದರೆ ರೈತ ಸಂಘಗಳು ಅದನ್ನು ತಿರಸ್ಕರಿಸಿದವು.
ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು 70 ದಿನಗಳಿಂದ ದೆಹಲಿಯ ಮೂರು ಗಡಿ ಕೇಂದ್ರಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರಗಳಲ್ಲಿ ಸತ್ಯಾಗ್ರಹ ಮಾಡುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ