ತುಮಕೂರು: ಭವಿಷ್ಯದಲ್ಲಿ ಯಾರು ರಾಜಾಹುಲಿ ಆಗ್ತಾರೆ ಯಾರು ಬೆಟ್ಟದ ಹುಲಿ ಆಗ್ತಾರೆ ಎಂಬುದನ್ನು ರಾಜ್ಯದ ಜನರೇ ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ರಾಜ್ಯದಲ್ಲಿ ಲೂಟಿ ಮಾಡಿರುವ ಹಣದಲ್ಲಿ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಹಣದಿಂದ ಎಲ್ಲವನ್ನೂ ಖರೀದಿ ಮಾಡುವುದು ಸಾಧ್ಯವಿದ್ದರೆ ಟಾಟಾ, ಬಿರ್ಲಾರಂಥ ಉದ್ಯಮಿಗಳು ಈ ದೇಶದ ಪ್ರಧಾನಿಗಳು ಆಗಬೇಕಿತ್ತು. ರೈಲಿನಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ, ಶಿಕ್ಷಕನ ಮಗ ಲಾಲ್ ಬಹದ್ದೂರ್ ಶಾಸ್ತ್ರಿ ಅಂಥವರು ಈ ದೇಶದ ಪ್ರಧಾನಿ ಆಗುತ್ತಿರಲಿಲ್ಲ ಎಂದು ಹೇಳಿದರು.
ಎಲ್ಲರ ಬಳಿಯೂ ಹಣವಿದೆ. ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಅವರ ಹತ್ತಿರವೂ ಹಣವಿದೆ. ಎರಡು ಚುನಾವಣೆ ಗೆದ್ದ ಮಾತ್ರಕ್ಕೆ ಅವರ ನಾಯಕತ್ವದಲ್ಲಿಯೇ ಚುನಾವಣೆ ಗೆಲ್ಲುತ್ತೇವೆ ಎಂದು ಹೇಳುವುದು ಸರಿಯಲ್ಲ ಎಂದರು.
ನಾನು ಯಾವುದಕ್ಕೂ ಅಂಜುವುದಿಲ್ಲ, ಯಾರ ಕ್ಷಮೆಯನ್ನೂ ಕೇಳುವುದಿಲ್ಲ. ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವ ನೇರ ವ್ಯಕ್ತಿ ನಾನು. ಶನಿವಾರ ನಡೆದ 42 ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲೂ ಹಣದ ಹರಿದಾಟ ನಡೆದಿದೆ. ಹೋಲ್‌ಸೇಲ್ ವ್ಯಾಪಾರದಂತೆ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ ಎಂದು ಯತ್ನಾಳ್ ಆರೋಪಿಸಿದರು.
ಮೈಸೂರಿನಲ್ಲಿ ಮಾತನಾಡಿದ್ದ ಸಚಿವ ಎಸ್‌ಟಿ ಸೋಮಶೇಖರ್, ಬಿಎಸ್ ಯಡಿಯೂರಪ್ಪ ಅವರ ಬಳಿಕ ಬಿ.ವೈ. ವಿಜಯೇಂದ್ರ ಅವರೇ ರಾಜಾಹುಲಿ ಎಂದು ಹೇಳಿದ್ದು, ತಂದೆಯ ಹಾದಿಯಂತೆ ಮಗನು ಕೂಡ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ ನಂತರ ಯತ್ನಾಳ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ